ಪುತ್ತೂರು: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಬಕನಲ್ಲಿ ನಡೆದ ವಾಹನ ಜಾಥಾದಲ್ಲಿ ಸಾವರ್ಕರ್ ಫೋಟೋ ಬಳಸಿ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಲು ಠಾಣೆಗೆ ತೆರಳಿದ ಎಸ್ ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಠಾಣೆಯಲ್ಲೇ ಇರಿಸಿದ್ದಾರೆ. ಕೂಡಲೇ ಈ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪುತ್ತೂರು ಠಾಣೆ ಎದುರು ಪ್ರತಿಭಟಿಸಲಾಗುವುದು ಎಂದು ಎಸ್ ಡಿಪಿಐ ಎಚ್ಚರಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಬಕ ಗ್ರಾಮ ಪಂಚಾಯತ್ ನಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ವಾಹನ ಜಾಥಾದಲ್ಲಿ ಸಾವರ್ಕರ್ ಭಾವಚಿತ್ರ ಇದ್ದುದನ್ನು ಕಂಡ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಾಹನಕ್ಕೆ ತಡೆ ಒಡ್ಡಿದ್ದರು.
ಗ್ರಾಮ ಪಂಚಾಯತ್ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನವಾಗಿರಲಿಲ್ಲ. ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಅವರ ಪರವಾಗಿ ಕೆಲಸ ಮಾಡಿದ ಸಾವರ್ಕರ್ ಭಾವಚಿತ್ರವನ್ನು ನೈಜ ಸ್ವಾತಂತ್ರ್ಯ ಹೋರಾಟಗಾರರ ಚಿತ್ರದೊಂದಿಗೆ ಸೇರಿಸಿರುವುದು ಸರಿಯಲ್ಲ ಎಂದು ಎಸ್ ಡಿಪಿಐ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಕೆಲವು ಹೊತ್ತು ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಭಯ ಕಡೆಯವರನ್ನು ಸಮಾಧಾನ ಪಡಿಸಿ ಜಾಥಾಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಸ್ಥಳೀಯರನ್ನು ಪೊಲೀಸರು ಚದುರಿಸಿದ್ದರು.
ಬಳಿಕ ಈ ಬಗ್ಗೆ ದೂರು ನೀಡಲು ಎಸ್ ಡಿಪಿಐ ಕಾರ್ಯಕರ್ತರು ನಿರ್ಧರಿಸಿ, ಪುತ್ತೂರು ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು. ಘಟನೆಗೆ ಕಾರಣರಾದ ಕಬಕ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸುವ ಬದಲು ನಮ್ಮ ಕಾರ್ಯಕರ್ತರನ್ನೇ ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ. ಸಂಜೆಯೊಳಗೆ ಕಾರ್ಯಕರ್ತರನ್ನ ಬಿಡುಗಡೆ ಮಾಡದಿದ್ದರೆ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ ಡಿಪಿಐ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕೂಡ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಕಾರಣ ನೀಡಿ ಉಭಯ ಕಡೆಯವರಿಗೂ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.