ನವದೆಹಲಿ: ಇತ್ತಿಚೆಗೆ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ಬೆನ್ನಲ್ಲೇ, ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೆ, ಮಹಾತ್ಮ ಗಾಂಧಿಯನ್ನು ಕೊಲ್ಲಲು ಗೋಡ್ಸೆಗೆ ಸಹಾಯ ಮಾಡಿದ್ದರು ಎಂದು ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಾವರ್ಕರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತುಷಾರ್ ಗಾಂಧಿ , ಬಾಪು ಅವರನ್ನು ಕೊಲ್ಲುವುದಕ್ಕೆ ನಾಥುರಾಂ ಗೋಡ್ಸೆಗೆ ಸಮರ್ಪಕವಾಗಿ ಬಂದೂಕು ಸಿಗುವಂತೆ ನೋಡಿಕೊಂಡಿದ್ದು ಸಾವರ್ಕರ್. ಬಾಪು ಅವರ ಹತ್ಯೆಗೂ ಎರಡು ದಿನ ಮುಂಚೆ ಗೋಡ್ಸೆ ಬಳಿ ಯಾವುದೇ ರೀತಿಯ ಸಮರ್ಪಕವಾದ ಬಂದೂಕು ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಯಾರ ಬಗ್ಗೆಯೂ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸರು ಹಾಕಿರುವ ಎಫ್ ಐಆರ್ ಪ್ರಕಾರ, ನಾಥೂರಾಮ್ ಗೂಡ್ಸೆ ಹಾಗೂ ಸಾವರ್ಕರ್ ಅವರು 1948ರ ಜನವರಿ 26, 27 ರಂದು ಭೇಟಿಯಾಗಿದ್ದರು. ಈ ಭೇಟಿಗೂ ಮುನ್ನ ಅವರ ಬಳಿ ಸರಿಯಾದ ಬಂದೂಕು ಇರಲಿಲ್ಲ. ಎಲ್ಲಾ ಕಡೆ ಬಂದೂಕಿಗಾಗಿ ಹುಡುಕಾಡುತ್ತಿದ್ದರು. ಭೇಟಿಯ ಬಳಿಕ ನೇರವಾಗಿ ದೆಹಲಿಗೆ ಹೋಗಿ ಅಲ್ಲಿಂದ ಗ್ವಾಲಿಯರ್ ಗೆ ಹೋದ ಮೇಲೆ ಬಂದೂಕು ಸಿಕ್ಕಿದೆ ಎಂದು ಹೇಳಿದ್ದಾರೆ.