ಪತ್ನಿ ಟಿಎಂಸಿಗೆ ಸೇರಿದುದಕ್ಕೆ ಗರಂ ಆದ ಬಿಜೆಪಿ ಸಂಸದ | ಡೈವೋರ್ಸ್ ನೋಟಿಸ್ ಕಳುಹಿಸುತ್ತೇನೆ ಎಂದ ಸೌಮಿತ್ರ ಖಾನ್

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಇರುವಾಗಲೇ, ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ. ಈಗಾಗಲೇ ಟಿಎಂಸಿ ತೊರೆದು ಕೆಲವರು ಬಿಜೆಪಿ ಸೇರಿದರೆ, ಬಿಜೆಪಿಯಿಂದ ಮುಖ್ಯವಾಗಿ ಸಂಸದರೊಬ್ಬರ ಪತ್ನಿ ಟಿಎಂಸಿ ಸೇರಿದುದು ಭಾರೀ ಸುದ್ದಿಯಾಗಿತ್ತು. ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಮೊಂಡಲ್ ಖಾನ್ ಟಿಎಂಸಿ ಸೇರುತ್ತಿದ್ದಂತೆ, ಬಿಜೆಪಿಗೆ ದೊಡ್ಡ ಮುಖಭಂಗವಾಗಿತ್ತು. ಇದೀಗ ಸಂಸದ ಖಾನ್ ಇದರಿಂದ ವಿಚಲಿತರಾಗಿ ತಮ್ಮ ಪತ್ನಿಗೇ ವಿಚ್ಛೇಧನೆ ನೀಡುವುದಾಗಿ ಹೇಳಿದ್ದಾರೆ.

- Advertisement -

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಷ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಗಂಡನ ಗೆಲುವಿಗಾಗಿ ಸುಜಾತಾ ಸಾಕಷ್ಟು ಶ್ರಮಿಸಿದ್ದರೂ, ಬಿಜೆಪಿಯಲ್ಲಿ ತನಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಪತ್ನಿಯ ಆರೋಪವನ್ನು ಸೌಮಿತ್ರ ಖಾನ್ ತಳ್ಳಿ ಹಾಕಿದ್ದಾರೆ.

ಆಕೆಯ ನಿರ್ಧಾರದಿಂದ ತನಗೆ ಆಘಾತವಾಗಿದೆ. ಸುಜಾತಾರಿಂದ ವಿಚ್ಛೇಧನೆ ಪಡೆಯಲು ನೋಟಿಸ್ ಕಳುಹಿಸುವುದಾಗಿ ಸೌಮಿತ್ರ ಖಾನ್ ಹೇಳಿದ್ದಾರೆ.

- Advertisement -

2014ರಲ್ಲಿ ಸೌಮಿತ್ರ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, 2019ರ ಚುನಾವಣೆಯ ವೇಳೆ ಅವರ ಮೇಲೆ ಕ್ರಿಮಿನಲ್ ಕೇಸ್ ಇದ್ದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಕ್ಕೆ ಪ್ರವೇಶಿಸದಂತೆ ಸೌಮಿತ್ರಗೆ ನ್ಯಾಯಾಲಯವೊಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಡೀ ಚುನಾವಣೆಯ ಪ್ರಚಾರದ ಹೊಣೆ ಹೊತ್ತು ಸುಜಾತಾ ಮೊಂಡಲ್ ಪತಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸುಜಾತಾ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು, ಬಿಜೆಪಿ ಪ್ರಮುಖರಾದ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಜೊತೆ ಅವರು ವೇದಿಕೆಯನ್ನೂ ಹಂಚಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಟಿಎಂಸಿ ತೊರೆದು ಹಲವು ನಾಯಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದುದರಿಂದ, ಸುಜಾತಾ ಪಕ್ಷ ಸೇರ್ಪಡೆ ಸಿಎಂ ಮಮತಾ ಬ್ಯಾನರ್ಜಿಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ.

Join Whatsapp