ರಿಯಾಧ್ : ಹೊಸ ರೂಪಾಂತರಿತ ಕೊರೊನ ವೈರಸ್ ಯುರೋಪ್ ದೇಶಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ತನ್ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಒಂದು ವಾರದ ಮಟ್ಟಿಗೆ ರದ್ದುಗೊಳಿಸಿದೆ ಮತ್ತು ಭೂ ಸಾರಿಗೆ ಮತ್ತು ಸಮುದ್ರ ಗಡಿಗಳನ್ನೂ ಮುಚ್ಚಿದೆ.
ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ಇನ್ನೂ ಒಂದು ವಾರ ಈ ಆದೇಶ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ತುರ್ತು ಸಂದರ್ಭಗಳಲ್ಲಿ ಕೊರೊನ ಸೋಂಕು ತಡೆಗೆ ಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರಯಾಣಕ್ಕೆ ಅವಕಾಶ ಕೊಡಲಾಗುತ್ತದೆ.
ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ವಿದೇಶಿ ವಿಮಾನಗಳನ್ನು ಹೊರಗಿನ ದೇಶಗಳಿಗೆ ತೆರಳಲು ಅವಕಾಶ ನೀಡಲಾಗುತ್ತದೆ. ಆದರೆ, ಹೊರ ದೇಶಗಳ ವಿಮಾನಗಳನ್ನು ಸೌದಿ ಅರೇಬಿಯಾ ಪ್ರವೇಶಕ್ಕೆ ಒಂದು ವಾರ ನಿಷೇಧಿಸಲಾಗಿದೆ. ಅದು ಇನ್ನೂ ಒಂದು ವಾರ ಮುಂದುವರಿಯಬಹುದಾದ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.
ಹೊಸ ರೂಪಾಂತರಿತ ಕೊರೊನ ವೈರಸ್ ಪತ್ತೆಯಾದ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಈಗಾಗಲೇ ಬಂದವರು 15 ದಿನಗಳ ಕಾಲ ಸ್ವಯಂ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಬೇಕು. ಈ ಅವಧಿಯಲ್ಲಿ ಐದು ದಿನಗಳ ಬಳಿಕ ಅವರು ಕೊರೊನ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಮುಂತಾದ ಹಲವು ನಿರ್ದೇಶನಗಳನ್ನು ನೀಡಲಾಗಿದೆ.