ಅಬುದಾಬಿ: ಸೌದಿ ಅರೇಬಿಯದ ಬಹುನಿರೀಕ್ಷಿತ ಎಲೆಕ್ಟ್ರಾನಿಕ್ ಏರ್ ಟ್ಯಾಕ್ಸಿ ಸೇವೆಯ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಫ್ಯೂಚರಿಸ್ಟ್ ಸ್ಮಾರ್ಟ್ ಸಿಟಿಯಲ್ಲಿ ಏರ್ ಟ್ಯಾಕ್ಸಿ ಒಂದು ವಾರದಿಂದ ಸುರಕ್ಷಿತ ಟೇಕಾಫ್ ಹಾಗೂ ಲ್ಯಾಂಡಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೋಲೋಕಾಪ್ಟರ್ ಹಾಗೂ ಜನರಲ್ ಆಥಾರಿಟಿ ಆಫ್ ಸಿವಿಲ್ ಏವಿಯೇಷನ್‌ನ ಸಹಯೋಗದಲ್ಲಿ 18 ತಿಂಗಳ ಹಿಂದಿನಿಂದ ಅಭಿವೃದ್ಧಿ ಪಡಿಸಿರುವ ಇ- ಏರ್ ಟ್ಯಾಕ್ಸಿಯನ್ನು ನಿಯೋಮ್ ಸ್ಮಾರ್ಟ್‌ಸಿಟಿಯಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ.
ಸೌದಿ ಅರೇಬಿಯದ ವಿನೂತನ ಸಾರಿಗೆ ವ್ಯವಸ್ಥೆಗೆ ಈ ಪರೀಕ್ಷೆಯು ಅಡಿಗಲ್ಲಾಗಲಿದೆ ಎಂದು ನಿಯೋಮ್ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ. ಮತ್ತೊಂದು ವಿಶೇಷವೆಂದರೆ, ದೇಶದಲ್ಲಿ ಇದೇ ಮೊದಲ ಬಾರಿಗೆ ಇ- ಏರ್ ಟ್ಯಾಕ್ಸಿಯೊಂದಕ್ಕೆ ವಿಶೇಷ ವಿಮಾನ ಮಾನ್ಯತೆ ಹಾಗೂ ಅನುಮತಿ ದೊರೆತಿದೆ.