ಉಡುಪಿ: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ 40 % ಕಮಿಷನರ್ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಮೃತದೇಹ ಉಡುಪಿಯ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಸಂತೋಷ್ ಪಾಟೀಲ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಅವರ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್ಜ್ ಗಳಲ್ಲಿ ತಪಾಸಣೆ ನಡೆಸಿದಾಗ ಶಾಂಭವಿ ಲಾಡ್ಜ್ ನಲ್ಲಿ ಸಂತೋಷ್ ಪಾಟೀಲ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ಪಾಟೀಲ ‘ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ’.
ಸಚಿವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ, ಮಕ್ಕಳಿಗೆ ಪ್ರಧಾನಿ, ಮುಖ್ಯಮಂತ್ರಿ , ಬಿ.ಎಸ್. ಯಡಿಯೂರಪ್ಪ ಸಹಾಯ ಮಾಡಬೇಕು’ ಎಂದು ಬರೆದಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಎಂದು, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ ಪಾಟೀಲ್ ಆರೋಪ ಮಾಡಿದ್ದರು.
ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಗುತ್ತಿಗೆ ಹಣ ಬಿಡುಗಡೆಗಾಗಿ ಶೇ.40ರಷ್ಟು ಕಮೀಷನ್ ಆರೋಪವನ್ನು ಸಂತೋಷ್ ಮಾಡಿ ಬಿಜೆಪಿ ವರಿಷ್ಠರಿಗೂ ಈ ಸಂಬಂಧ ಭೇಟಿಯಾಗಿ ದೂರು ನೀಡಿದ್ದರು.
ಈ ವಿಷಯವಾಗಿಯೇ ಕಾಂಗ್ರೆಸ್ ಕಳೆದ ವಿಧಾನಸಭೆಯ ವೇಳೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ, ಸಂಪುಟದಿಂದ ಕಮೀಷನ್ ಆರೋಪ ಹೊತ್ತಿರುವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆಯೂ ಒತ್ತಾಯಿಸಿತ್ತು.
ಆದರೆ ಸಚಿವ ಈಶ್ವರಪ್ಪ ಮಾತ್ರ ನಾನು ಯಾವುದೇ ಕಮೀಷನ್ ಪಡೆದಿಲ್ಲ. ಸಂತೋಷ್ ಪಾಟೀಲ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟ ಪಡಿಸಿದ್ದರು.