ಬೆಂಗಳೂರು: ರಾಜ್ಯಾದ್ಯಂತ ತಲ್ಲಣ ಮೂಡಿಸಿದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯ 29 ಪಿಡಿಒ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿರುವ ಸ್ಪೋಟಕ ಮಾಹಿತಿ ವರದಿಯಾಗಿದೆ.
ಉಡುಪಿಯ ಶಾಂಭವಿ ಹೋಟೆಲ್‍ನಲ್ಲಿ ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈಶ್ವರಪ್ಪ ದಿಢೀರನೇ 29 ಪಿಡಿಒ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪನವರೇ ಕಾರಣ ಎಂದು ನೇರ ಆರೋಪ ಮಾಡಿದ್ದರು.
ಇದೀಗ ಅದೇ ದಿನದಂದು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 29 ಪಿಡಿಒಗಳನ್ನು ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಸಿಎಂ ಅನುಮೋದನೆ ನೀಡಿದ್ದು ಹತ್ತು ಹಲವು ಸಂಶಯಗಳಿಗೆ ಈಡು ಮಾಡಿದೆ.