ಉಡುಪಿ: ಬಿಜೆಪಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಕಮಿಷನ್ ಆರೋಪ ಹೊರಿಸಿ, ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಬರೆದುಕೊಂಡಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಕೇಸರಿ ಶಾಲು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಕಂಡು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತರ ಸಂಬಂಧಿಕರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ಪ್ರಕರಣದ ತನಿಖೆ ಆರಂಭಗೊಂಡಿದ್ದು,ಘಟನೆಗೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ದೂರು ಹಾಗೂ ಕುಟುಂಬಿಕರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿರುವ ರೂಮಿನ ಬಾಗಿಲು ತೆರೆದು ತನಿಖೆ ಆರಂಭಿಸಲಾಗಿದೆ.
ಈ ವೇಳೆ ಹಾಸಿಗೆ ಮೇಲೆ ಮಲಗಿರುವಂತೆ ಸಂತೋಷ್ ಪಾಟೀಲ್ ಅವರ ಮೃತದೇಹ ಕಂಡುಬಂದಿದೆ. ಹಸಿರು ಶರ್ಟ್ ಮತ್ತು ರೆಗ್ಯೂಲರ್ ಪ್ಯಾಂಟ್ ಜೊತೆಗೆ ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಮೃತದೇಹವಿದೆ. ಅಲ್ಲದೆ ಕೋಣೆಯ ಡಸ್ಟ್ ಬಿನ್ ನಲ್ಲಿ ವಿಷದ ಬಾಟಲಿ ತರದ ಡಬ್ಬಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಎಫ್ ಎಸ್ ಎಲ್ ತಂಡ ಆಗಮಿಸಿರುವ ಹಿನ್ನೆಲೆಯಲ್ಲಿ ಲಾಡ್ಜ್ ಗೆ ಸಂತೋಷ ಪಾಟೀಲ್ ಅವರ ಕುಟುಂಬಸ್ಥರು ಬಂದಿದ್ದು, ಅವರ ಸಮ್ಮುಖದಲ್ಲಿ ಎಫ್.ಎಸ್.ಎಲ್ ತಂಡ ಪಂಚನಾಮೆ ಆರಂಭಿಸಿದೆ.
ಈ ವೇಳೆ ಸ್ಥಳದಲ್ಲಿ ಎಎಸ್ಪಿ ಸಿದ್ದಲಿಂಗಪ್ಪ, ತನಿಖಾಧಿಕಾರಿ ಪ್ರಮೋದ್ ಪಂಚನಾಮೆಯಲ್ಲಿ ಭಾಗಿಯಾಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಐಜಿಪಿ ದೆವ್ ಜ್ಯೋತಿ ರೇ ಅವರು ಇದ್ದಾರೆ. ಇನ್ನು ಪಂಚನಾಮೆ ಬಳಿಕ ಮೃತದೇಹವನ್ನು ಮಣಿಪಾಲ ಕೆಎಂಸಿಯ ಶವಾಗಾರಕ್ಕೆ ವರ್ಗಾಯಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.