ನವದೆಹಲಿ: ಆಮ್ ಆದ್ಮಿ ಪಕ್ಷ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಎಎಪಿ ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದೆ. ರಾಜ್ಯಸಭೆಯಲ್ಲಿಯೂ ಪಕ್ಷದ ನಾಯಕರನ್ನಾಗಿ ಅವರನ್ನೇ ಆಯ್ಕೆ ಮಾಡಿದೆ.
ರಾಜ್ಯಸಭೆಯಲ್ಲಿ 10 ಸಂಸದರನ್ನು ಹೊಂದಿರುವ ಎಎಪಿ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. ಲೋಕಸಭೆಯಲ್ಲಿ ಮೂವರು ಸಂಸದರನ್ನು ಹೊಂದಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವುದರಿಂದ ಸಂಜಯ್ ಸಿಂಗ್ ಅವರಿಗೆ ಪಕ್ಷದ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.
ರಸ್ತೆಯಿಂದ ಹಿಡಿದು ಸಂಸತ್ತಿನವರೆಗೆ ಧ್ವನಿ ಎತ್ತಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನನಗೆ ಯಾವಾಗಲೂ ಅವಕಾಶವನ್ನು ನೀಡಿದ್ದಾರೆ. ಸಂಸದೀಯ ಪಕ್ಷದ ಮುಖ್ಯಸ್ಥನಾಗಿ ಸಮರ್ಪಣಾ ಭಾವದಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಸಂಸದ ಸಂಜಯ್ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.