ಸಂಘಪರಿವಾರದ ಅನೈತಿಕ ಪೋಲಿಸ್‌ಗಿರಿ: ಆ್ಯಂಟಿ ಕಮ್ಯೂನಲ್ ವಿಂಗ್ ಕೇವಲ ಹೇಳಿಕೆಗೆ ಮಾತ್ರ ಸೀಮಿತವೇ? : ಎಸ್‌ಡಿಪಿಐ ಆಕ್ರೋಶ

Prasthutha|

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಿದ್ದು,  ಸರಕಾರ ಮಂಗಳೂರು ನಗರಕ್ಕೆ ಸೀಮಿತವಾಗಿ ಮಾಡಿದ್ದ ಆ್ಯಂಟಿ ಕಮ್ಯೂನಲ್ ವಿಂಗ್ ಕೇವಲ ಮುಸ್ಲಿಮರ ಮನವೊಲಿಕೆಗೆ ಮಾಡಿದಂತೆ ತೋಚುತ್ತಿದೆ . ಪತ್ರಿಕಾ ಗೋಷ್ಠಿಯಲ್ಲಿ ಕೇವಲ ವಿಂಗ್ ಘೋಷಣೆ ಮಾಡಿದ್ದೇ ಹೊರತು ಈ ವಿಂಗ್ ಆ್ಯಕ್ಟಿವ್ ಇಲ್ಲದೆ  ಇರುವುದು ಇತ್ತೀಚಿನ ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ ಎಂದು ಎಸ್‌ಡಿಪಿಐ ದ‌.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ವಾರಗಳ ಹಿಂದೆ ಬಂಟ್ವಾಳದಲ್ಲಿ ಪೋಲಿಸ್ ಸಿಬ್ಬಂದಿಯೊಬ್ಬರು ತನ್ನ ಹೆಂಡತಿ ಹಾಗೂ ನಾದಿನಿ ಜೊತೆಗೆ ಹೋಟೆಲಿಗೆ ತೆರಳಿ ಹಿಂದಿರುಗುತ್ತಿರುವಾಗ ಸಂಘಪರಿವಾರದ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ ಹಿಂದು ಹುಡುಗಿಯನ್ನು ನೀನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯಾ ಎಂದು ಪ್ರಶ್ನಿಸಿ ಗೂಂಡಾಗಿರಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಈ ತಿಂಗಳ 26 ನೇ ತಾರೀಕಿನಂದು  ಮಂಗಳೂರಿನ ಕಾವೂರಿನಲ್ಲಿ ವೆಬ್ ನ್ಯೂಸ್  ಒಂದರ ವರದಿಗಾರ ತನ್ನದೇ ಧರ್ಮದ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್ ಗೆ ತೆರಳಿ ಮರಳಿ ಬರುತ್ತಿರುವಾಗ ಅಡ್ಡಗಟ್ಟಿದ ಸಂಘಪರಿವಾರದ ಕಾರ್ಯಕರ್ತರು ಬಂಟ್ವಾಳದಲ್ಲಿ ಎತ್ತಿದ ಪ್ರಶ್ನೆಯನ್ನೇ ಕೇಳಿ ಅನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ಒಟ್ಟಾರೆ ಈ ಬೆಳವಣಿಗೆಯನ್ನು ಗಮಿಸಿದಾಗ ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರ ಎಂದು ಸ್ಪಷ್ಟವಾಗುತ್ತಿದೆ ಎಂದು ಅಶ್ರಫ್ ಕಿಡಿಕಾರಿದ್ದಾರೆ.

- Advertisement -

ದ.ಕ ಜಿಲ್ಲೆಯಲ್ಲಿ ಕೋಮು ಆಧಾರಿತ ಗಲಭೆಗಳು ಅಧಿಕವೆಂಬ ಕಾರಣಕ್ಕೆ ಸರ್ಕಾರ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿ  ಪೋಲಿಸ್ ವ್ಯವಸ್ಥೆಯ ಒಳಗೆ ಒಂದು ವಿಂಗ್ ಅನ್ನು ಸ್ಥಾಪಿಸಿದರು ಆ ವಿಂಗ್ ಇನ್ನೂ ಕಾರ್ಯಪ್ರವೃತವಾಗದೆ ಕೇವಲ ಮುಸ್ಲಿಮರ ಮನವೊಲಿಕೆಗೆ ಮತ್ತು ನಾಮಕಾವಸ್ತೆಗೆ ಮಾಡಿದಂತೆ  ಕಾಣುತ್ತಿದೆ. ಅಥವಾ ಒಂದು ವೇಳೆ ಈ ವಿಂಗ್ ಯಶಸ್ವಿಯಾದರೆ ಇದನ್ನು ಸರಕಾರ ರಾಜ್ಯಾದ್ಯಂತ ವಿಸ್ತರಿಸಬಹುದು ಎಂಬ ಕಾರಣಕ್ಕಾಗಿ ಸಂಘಪರಿವಾರ ಮನಸ್ಥಿತಿಯ ಪೋಲೀಸ್ ಅಧಿಕಾರಿಗಳೇ ಈ ವಿಂಗ್ ಅನ್ನು ಯಶಸ್ವಿ ಮಾಡಲು ಬಿಡುವುದಿಲ್ಲವೇ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬದಲಾದರೂ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ನಿಂತಿಲ್ಲ ಎಂಬುವುದಕ್ಕೆ ಇತ್ತೀಚಿನ ಹಲವಾರು ಘಟನೆಗಳೇ ಸಾಕ್ಷಿಯಾಗಿವೆ. ಅದಲ್ಲದೇ ದಾಳಿಕೋರರ ಉದ್ದೇಶ ಅವರು ಮುಸ್ಲಿಮರು ಎಂಬ ಕಾರಣವಾಗಿದೆ. ಇದು ಅತ್ಯಂತ ಆತಂಕದ ವಿಚಾರವಾಗಿದೆ. ಮುಸ್ಲಿಮರ ವಿರುದ್ಧ ವ್ಯವಸ್ಥಿತ ದಾಳಿಗೆ ಸಂಘಪರಿವಾರ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂಬುದರ ಸ್ಪಷ್ಟ ನಿದರ್ಶನವಾಗಿದೆ ಇವೆಲ್ಲಾ. ಸರ್ಕಾರ ಹಾಗೂ ಜಿಲ್ಲಾಡಳಿತ ಇಂತಹ ಪ್ರಕರಣದ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಆ್ಯಂಟಿ ಕಮ್ಯೂನಲ್ ವಿಂಗ್ ಗೆ ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳ ನೇಮಕ ಮಾಡಿ ಸಕ್ರೀಯಗೊಳಿಸಿ ದ.ಕ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

Join Whatsapp