ಬೆಂಗಳೂರು: ದೇವರ ಉತ್ಸವ ದಲಿತರ ಬೀದಿಗೂ ಬರಲಿ ಎಂದು ಕೇಳಿದ್ದಕ್ಕೆ ದಲಿತರನ್ನು ಥಳಿಸಿದ ಕೋಲಾರದ ಘಟನೆ ‘ಹಿಂದೂ ನಾವೆಲ್ಲ ಒಂದು’ ಎನ್ನುವುದು ಕೇವಲ ದಲಿತರನ್ನು ದಾರಿ ತಪ್ಪಿಸುವ ತಂತ್ರ ಎಂದು ತೋರಿಸುತ್ತದೆ ಎಂದು ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾತಿ ವ್ಯವಸ್ಥೆ ಈ ದೇಶದ ಅತಿ ದೊಡ್ಡ ಪಿಡುಗು. ಇದನ್ನು ಮುಂದಿಟ್ಟುಕೊಂಡು ಶತಮಾನಗಳಿಂದ ದಲಿತರ ಮೇಲೆ ಮನುವಾದಿಗಳು ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿದ್ದರೂ, ಸಂವಿಧಾನ ಜಾರಿಯಾಗಿ 72 ವರ್ಷ ಕಳೆದಿದ್ದರೂ, ದಲಿತರ ರಕ್ಷಣೆಗೆ ಸಾಕಷ್ಟು ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಅವರ ಮೇಲಿನ ದೌರ್ಜನ್ಯಗಳು ನಿಲ್ಲುವ ಸೂಚನೆಯೇ ಇಲ್ಲ ಎಂದು ಅಶ್ರಫ್ ಮಾಚಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರದ ದಾನವಹಳ್ಳಿಯ ದಲಿತರು ದೇವರ ಉತ್ಸವ ನಮ್ಮ ಬೀದಿಗೂ ಬರಲಿ ಎಂದು ಕೇಳಿದ್ದೇ ತಪ್ಪಾಯಿತು. ಸವರ್ಣಿಯರು ಅವರನ್ನು ಜಾತಿ ನಿಂದನೆ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
‘ಹಿಂದೂ ನಾವೆಲ್ಲ ಒಂದು’ ಎನ್ನುವುದು ಸಂಘ ಪರಿವಾರದ ಘೋಷಣೆ. ಆದರೆ ದಲಿತರ ಮೇಲೆ ಇಂತಹ ದೌರ್ಜನ್ಯಗಳು ನಡೆದಾಗ ಅದು ತುಟಿ ಬಿಚ್ಚುವುದಿಲ್ಲ, ಇದರಿಂದ ‘ಹಿಂದೂ ನಾವೆಲ್ಲ ಒಂದು’ ಎನ್ನುವ ಅವರ ಘೋಷಣೆ ಕೇವಲ ಒಂದು ಬೂಟಾಟಿಕೆ ಮತ್ತು ದಲಿತರನ್ನು ದಾರಿ ತಪ್ಪಿಸುವ ತಂತ್ರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅಶ್ರಫ್ ಅವರು ಹೇಳಿದರು. ಇಂತಹ ದೌರ್ಜನ್ಯವೆಸಗಿದ ಮತ್ತು ಜಾತಿಭೇದ ಮಾಡಿದ ಜಾತಿವಾದಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ