ಬೀದರ್ | ದಸರಾ ಶೋಭಾಯಾತ್ರೆ ನೆಪದಲ್ಲಿ ಮದರಸಾಕ್ಕೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು: ದೂರು ದಾಖಲು

Prasthutha|

ಬೀದರ್: ದಸರಾ ಶೋಭಾಯಾತ್ರೆಯ ನೆಪದಲ್ಲಿ ಸಂಘಪರಿವಾರದ ನೂರಾರು ಕಾರ್ಯಕರ್ತರು ಐತಿಹಾಸಿಕ ಮಹಮೂದ್ ಗವಾನ್ ಮದರಸಾದ ಬೀಗ ಮುರಿದು ಅಕ್ರಮವಾಗಿ ಪ್ರವೇಶ ಮಾಡಿ ದಾಂಧಲೆ ನಡೆಸಿದ ಘಟನೆ ಬೀದರ್ ನಲ್ಲಿ ನಡೆದಿದೆ.

- Advertisement -

ಪೊಲೀಸರ ಸಮ್ಮುಖದಲ್ಲಿ ಸಂಘಪರಿವಾರದ ಕಾರ್ಯಕರ್ತರು ಈ ದುಷ್ಕೃತ್ಯ ಮೆರೆದಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ನವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ದಸರಾ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ, ಇದು ದೇವಾಲಯ ಎಂದು ಹೇಳಿಕೊಂಡು ಮದರಸಾದ ಬೀಗ ಒಡೆದು ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಇದನ್ನು ಖಂಡಿಸಿ ಬೀದರ್ ನ ಹಲವಾರು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದವು. ಸದ್ಯ ಘಟನೆಗೆ ಕಾರಣವಾದ ನರೇಶ್ ಗೌಳಿ, ಪ್ರಕಾಶ್ ಮೆಕಾನಿಕ್, ಸಂಜು ಟೈಲರ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸದಿದ್ದರೆ ಶುಕ್ರವಾರದ ಪ್ರಾರ್ಥನೆಯ ಬಳಿಕ ಬೃಹತ್ ಮಟ್ಟದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮುಸ್ಲಿಮ್ ಸಂಘಟನೆಗಳು ಎಚ್ಚರಿಸಿವೆ.
ಬೀದರ್ ಕರ್ನಾಟಕದಲ್ಲಿ 1460ರ ದಶಕದಲ್ಲಿ ನಿರ್ಮಿಸಲಾದ ಐತಿಹಾಸಿಕ ಮಹಮೂದ್ ಗವಾನ್ ಮದರಸಾ ಏಷ್ಯಾದ ಮೊದಲ ವಿಶ್ವವಿದ್ಯಾಲಯ ಎಂದು ನಂಬಲಾಗಿದೆ. ವಿಶ್ವದಾದ್ಯಂತ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಇದು ಹೊಂದಿತ್ತು. ಮಸೀದಿಯನ್ನು ಹೊರತುಪಡಿಸಿ ಇಡೀ ಕಟ್ಟಡ ಪುರಾತತ್ವದ ಸ್ಮಾರಕವಾಗಿದೆ.



Join Whatsapp