ಕಂಟೈನರ್’ಗೆ ಮರಳು ಲಾರಿ ಡಿಕ್ಕಿಯಾಗಿ ಬೆಂಕಿ: ನಾಲ್ವರು ಸಜೀವದಹನ, ವಾಹನಗಳು ಭಸ್ಮ

Prasthutha|

ಕಾಕಿನಾಡ(ಆಂಧ್ರಪ್ರದೇಶ): ಸಿಗಡಿ ಸಾಗಿಸುತ್ತಿದ್ದ ಕಂಟೈನರ್’ಗೆ ಮರಳು ಲಾರಿಯೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿ ನಾಲ್ವರು ಸಜೀವ ದಹನವಾಗಿರುವ ದಾರುಣ ಘಟನೆ ಪ್ರತ್ತಿಪಾಡು ತಾಲೂಕಿನ ಧರ್ಮಾವರಂ ಬಳಿ ಸಂಭವಿಸಿದೆ.

- Advertisement -

ಉತ್ತರ ಪ್ರದೇಶದ ಊಂಚಿಡ್ ಗ್ರಾಮದ ಕಂಟೈನರ್ ಚಾಲಕ ವಿನೋದಕುಮಾರ್ ರಾಧೇಶ್ಯಾಮ್ ಯಾದವ್ (27), ಭೀಮಾವರಂ ಜಿಲ್ಲೆಯ ಯನಮದುರ್ರು ಗ್ರಾಮದ ಮೇಲ್ವಿಚಾರಕ ಕಾಳಿ ಪೆದ್ದಿರಾಜು (45), ಮರಳು ಲಾರಿ ಚಾಲಕ ಕೃಷ್ಣಾ ಜಿಲ್ಲೆಯ ಕೋಡೂರು ತಾಲೂಕಿನ ಪಡವರಿಪಾಲೆಂ ಗ್ರಾಮದ ಜನ್ನು ಶ್ರೀನು (45)ಮೃತಪಟ್ಟವರು. ಈ ಮೂವರು ಸೇರಿದಂತೆ ಮತ್ತೊಬ್ಬರು ಅದೇ ವಾಹನದಲ್ಲಿ ಸಜೀವ ದಹನವಾಗಿದ್ದು ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

ವಿಶಾಖ ಕಡೆಗೆ ವೇಗವಾಗಿ ಹೋಗುತ್ತಿದ್ದ ಮರಳು ಲಾರಿ ರಸ್ತೆಯ ಡಿವೈಡರ್’ಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಂಟೇನರ್’ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಂಟೈನರ್’ನ ಡೀಸೆಲ್ ಟ್ಯಾಂಕ್’ಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಈ ಅಪಘಾತ ಸಂಭವಿಸಿದೆ.

- Advertisement -

ಭೀಕರ ರಸ್ತೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಾತ್ರಿಯಿಡೀ ಬೆಂಕಿ ನಿಯಂತ್ರಿಸಲು ಶ್ರಮಿಸಿದರು. ಈ ಘಟನೆ ಕುರಿತು ಪ್ರತ್ತಿಪಾಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.

Join Whatsapp