ಕರಾಚಿ: ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಕರಾಚಿಯಲ್ಲಿನ ಸ್ಯಾಮ್ ಸಂಗ್ ಕಚೇರಿಯ ವಸ್ತುಗಳನ್ನು ಧ್ವಂಸ ಮಾಡಲಾಗಿದ್ದು, 20 ಕ್ಕೂ ಅಧಿಕ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಮಾಲ್ ನಲ್ಲಿ ಸ್ಥಾಪಿಸಲಾದ ಸ್ಯಾಮ್ ಸಂಗ್ ಕಂಪನಿಯ ಕಚೇರಿಯಲ್ಲಿ ವೈಫೈ ಸಾಧನಗಳಲ್ಲಿ ಪ್ರವಾದಿ ಮುಹಮ್ಮದರ ವಿರುದ್ಧದ ಹೇಳಿಕೆಗಳನ್ನು ಬಿತ್ತರಿಸಲಾಗಿತ್ತು. ಇದರಿಂದ ಕೋಪಗೊಂಡ ಗುಂಪೊಂದು ಕಚೇರಿ ಮೇಲೆ ದಾಳಿ ನಡೆಸಿದೆ. ಕಂಪನಿಯ ಜಾಹೀರಾತು ಫಲಕಗಳನ್ನು ಕಿತ್ತು ಹಾಕಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಕರಾಚಿ ಪೊಲೀಸರು ವೈಫೈ ಸಾಧನಗಳನ್ನು ಬಂದ್ ಮಾಡಿಸಿದ್ದಾರೆ. ಕಂಪನಿಯ 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬಂಧಿಸಿದ್ದಾರೆ.
ಇನ್ನು ಘಟನೆಯ ಬಳಿಕ ಎಚ್ಚೆತ್ತುಕೊಂಡ ಸ್ಯಾಮ್ ಸಂಗ್ ಕಂಪನಿ ಟ್ವಿಟರ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ಧರ್ಮದ ಪರ ಮತ್ತು ನಿಂದನೆ ಸಹಿಸುವುದಿಲ್ಲ. ಕಂಪನಿ ತಟಸ್ಥ ಧಾರ್ಮಿಕ ನೀತಿ ಅನುಸರಿಸುತ್ತದೆ ಎಂದು ಹೇಳಿದೆ.