ಡ್ರಗ್ಸ್ ಮಾಫಿಯಾ ತಂಡದಿಂದ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮೇಲೆ ದಾಳಿ

Prasthutha|

ಮುಂಬೈ : ಮಾದಕ ದ್ರವ್ಯ ತಡೆ ಸಂಸ್ಥೆ (ಎನ್ ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಮೇಲೆ ಮಾದಕ ದ್ರವ್ಯ ಕಳ್ಳ ಸಾಗಾಟಗಾರರ ಗುಂಪೊಂದು ದಾಳಿ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮುಂಬೈಯ ಗೋರೆಗಾಂವ್ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ.

- Advertisement -

ವಾಂಖೆಡೆ ಮತ್ತು ಅವರ ತಂಡದ ಮೇಲೆ ಸುಮಾರು 60 ಮಂದಿಯಿಂದ ದಾಳಿ ನಡೆದಿದೆ. ಇಬ್ಬರು ಎನ್ ಸಿಬಿ ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ.

ಮಾದಕ ದ್ರವ್ಯ ಕಳ್ಳಸಾಗಾಟಗಾರ ಕ್ಯಾರಿ ಮಂಡಿಸ್ ಎಂಬಾತನನ್ನು ಬಂಧಿಸಲು ಎನ್ ಸಿಬಿ ತಂಡ ತೆರಳಿತ್ತು. ಎನ್ ಸಿಬಿ ಅಧಿಕಾರಿಗಳನ್ನು ರಕ್ಷಿಸಲು ಮತ್ತು ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಮುಂಬೈ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

- Advertisement -

ಕ್ಯಾರಿ ಮಂಡಿಸ್ ಮತ್ತು ಆತನ ಮೂವರು ಸಹಚರರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಶನಿವಾರ ಕಾಮಿಡಿಯನ್ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡಕ್ಷನ್ ಕಚೇರಿ ಮೇಲೆ ಎನ್ ಸಿಪಿ ದಾಳಿ ನಡೆಸಿತ್ತು ಮತ್ತು ಬಳಿಕ ಆಕೆಯನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಭಾನುವಾರ ಆಕೆಯ ಪತಿ ಹಾರ್ಷ್ ಲಿಂಬಾಚಿಯಾನ ಬಂಧನ ನಡೆದಿದೆ. ಇದೀಗ ಸೋಮವಾರ ಎನ್ ಸಿಬಿ ತಂಡದ ಮೇಲೆ ದಾಳಿ ನಡೆದಿದೆ.

ಭಾರತಿ ಸಿಂಗ್ ಈ ಹಿಂದೆ ಬಿಜೆಪಿ ಪರ ಪ್ರಚಾರ ನಡೆಸಿದ್ದ, ಟಿವಿ ಶೋಗಳಲ್ಲಿ ಖ್ಯಾತಿ ಪಡೆದಿರುವ ಕಾಮಿಡಿ ನಟಿ.

ಡಿ.4ರ ವರೆಗೆ ಭಾರತಿ ಮತ್ತು ಹಾರ್ಷ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರ ವಿರುದ್ಧ ಮಾದಕದ್ರವ್ಯ ಸೇವಿಸಿದ ಆರೋಪಗಳನ್ನು ದಾಖಲಿಸಲಾಗಿದೆ ಎಂದು ವಾಂಖೆಡೆ ಹೇಳಿದ್ದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ವಾಟ್ಸಪ್ ಚಾಟ್ ಗಳ ಆಧಾರದಲ್ಲಿ, ಬಾಲಿವುಡ್ ನಲ್ಲಿ ಡ್ರಗ್ ಬಳಕೆಯ ಬಗ್ಗೆ ಎನ್ ಸಿಬಿ ತನಿಖೆ ನಡೆಸುತ್ತಿದೆ.



Join Whatsapp