ಸಲಿಂಗ ವಿವಾಹ ಪ್ರಕರಣ: ಒಟ್ಟಾಗಿ ವಾಸಿಸುತ್ತಿದ್ದ ಇಬ್ಬರು ತರುಣಿಯರನ್ನು ಬೇರ್ಪಡಿಸಿ ಹೆತ್ತವರಲ್ಲಿಗೆ ಕಳುಹಿಸಿದ ಪೊಲೀಸರು

Prasthutha|

ಸೇಲಂ: ಒಟ್ಟಾಗಿ ವಾಸಿಸುತ್ತಿದ್ದ ಇಪ್ಪತ್ತರ ಹರೆಯದ ಇಬ್ಬರು ತರುಣಿಯರನ್ನು ಪತ್ತೆ ಹಚ್ಚಿದ ಪೊಲೀಸರು, ಅವರಿಬ್ಬರನ್ನೂ ಅವರ ಪೋಷಕರಲ್ಲಿಗೆ ಕಳುಹಿಸಿದ ಘಟನೆ ಸೇಲಂನಲ್ಲಿ ನಡೆದಿದೆ. ಇದು ಸಲಿಂಗ ವಿವಾಹ ಪ್ರಕರಣ ಎನ್ನಲಾಗಿದೆ.

- Advertisement -

ಘಟನೆಯ ವಿವರ :
ಸೇಲಂನ ತಲೈವಾಸಲ್ ಕಾಲೇಜಿನಲ್ಲಿ 20ರ ಹರೆಯದ ಅದಿತಿ ಮತ್ತು ಅಹಲ್ಯ ಪರಸ್ಪರ ಭೇಟಿಯಾಗುತ್ತಾರೆ. ಈ ಮಧ್ಯೆ ಅದಿತಿ ಆಕೆಯ ಹೆತ್ತವರು ನೋಡಿದ ಹುಡುಗನನ್ನು ಮದುವೆ ಆಗಿತ್ತಾಳೆ. 2021ರ ಜುಲೈ ತಿಂಗಳಲ್ಲಿ ಅವರಿಬ್ಬರು ತಾವು ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ ತರಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಹೋಗುತ್ತಾರೆ. ಆದರೆ ಅವರು ನೇರವಾಗಿ ಚೆನ್ನೈಗೆ ಹೋಗಿ ಅಲ್ಲಿಯೇ ಬಾಡಿಗೆ ಮನೆಯಲ್ಲಿ ಒಟ್ಟಾಗಿ ನೆಲೆಸುತ್ತಾರೆ.

ಅವರ ಕುಟುಂಬದವರು ಮತ್ತು ಅದಿತಿಯ ಗಂಡ ತಲೈವಾಸಲ್ ಪೊಲೀಸ್ ಠಾಣೆಗೆ ಅವರಿಬ್ಬರೂ ಕಾಣೆಯಾಗಿರುವ ಬಗೆಗೆ ದೂರು ಸಲ್ಲಿಸುತ್ತಾರೆ. ಸೇಲಂ ಪೊಲೀಸರ ಒಂದು ತಂಡವು ಅವರನ್ನು ಚೆನ್ನೈನ ಕನ್ನಗಿ ನಗರದಲ್ಲಿ ಪತ್ತೆ ಮಾಡುತ್ತದೆ. ಅಲ್ಲಿ ಅವರಿಬ್ಬರು ಒಂದು ಮಹಿಳೆಯರ ಗುಂಪನಲ್ಲಿ ವಾಸಿಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಅದಿತಿ ಮತ್ತು ಅಹಲ್ಯ ಪ್ರೌಢ ವಯಸ್ಕರಾಗಿದ್ದು, ದಂಪತಿಯರಂತೆ ವಾಸಿಸುತ್ತಿದ್ದರು ಎಂದು ಸೇಲಂ ಜಿಲ್ಲಾ ಡಿಎಸ್ಪಿ ತಿಳಿಸಿದ್ದಾರೆ.

- Advertisement -

ನಾವು ಅವರನ್ನು ಬೇರಾಗಲು ಒತ್ತಾಯಿಸಲಿಲ್ಲ. ತಮ್ಮ ಊರಾದ ಕಲ್ಲಕುರುಚ್ಚಿಗೆ ಬರಲು ಅವರೇ ತಯಾರಿದ್ದೇವೆ ಎಂದು ತಿಳಿಸಿದರು. ನಾವು ಮಹಿಳಾ ಪೊಲೀಸರ ಮೂಲಕ ಸಮಾಲೋಚನೆ ನಡೆಸಿ ಇದನ್ನು ದೃಢಪಡಿಸಿಕೊಂಡೆವು. ಅದಿತಿಯು ಹೆತ್ತವರಲ್ಲಿಗೆ ಬರುತ್ತೇನೆ. ಆದರೆ ಗಂಡನ ಜೊತೆ ವಾಸಿಸುವುದಿಲ್ಲ ಎಂದು ಸ್ಪಷ್ಟಪಡಿಸಿದಳು ಎಂದು ಡಿಎಸ್ಪಿ ಹೇಳಿದರು.

ಮದರಾಸು ಹೈಕೋರ್ಟ್ ಜಸ್ಟಿಸ್ ಆನಂದ ವೆಂಕಟೇಶ್ ಅವರು ಇತ್ತೀಚೆಗೆ ನೀಡಿದ ಒಂದು ತೀರ್ಪಿನಲ್ಲಿ LGBTQIA ದಂಪತಿಯರನ್ನು ರಕ್ಷಿಸಬೇಕು. ಪೊಲೀಸರು ಅವರನ್ನು ಪೀಡಿಸುವಂತಿಲ್ಲ ಎಂಬ ತಿಳಿಸಿತ್ತು. ಈ ಸಲಿಂಗ ವಿವಾಹ ಪ್ರಕರಣದಲ್ಲಿ ಈ ನಿಯಮವನ್ನು ಪಾಲಿಸಲಾಯಿತು ಎಂದು ಡಿಎಸ್ಪಿ ತಿಳಿಸುತ್ತಾರೆ.


ಮಧುರೈಯಿಂದ ಚೆನ್ನೈಗೆ ಓಡಿ ಹೋದ ಒಂದು ಮಹಿಳಾ ದಂಪತಿಯರ ಮೊಕದ್ದಮೆಯಲ್ಲಿ ಮದರಾಸು ಹೈಕೋರ್ಟು ಸಲಿಂಗಿ ದಂಪತಿಗೆ ರಕ್ಷಣೆ ನೀಡಬೇಕಾದ ಹೆಗ್ಗುರುತಾಗುವ ತೀರ್ಪನ್ನು ನೀಡಿತ್ತು. ಮನೆಯವರು ಕಾಣೆಯಾದ ಬಗೆಗೆ ದೂರು ನೀಡಿದರೂ ವಯಸ್ಕರು ಸಲಿಂಗಿ ಮದುವೆಯಾಗಿ ಬದುಕಿದ್ದರೆ ಅವರನ್ನು ಪೊಲೀಸರು ರಕ್ಷಿಸಬೇಕೇ ಹೊರತು ಕಾಡುವಂತಿಲ್ಲ, ಹೇಳಿಕೆ ಮಾತ್ರ ಪಡೆಯಬೇಕು ಎಂದು ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.

ಇಂಥ ಪ್ರಕರಣಗಳಲ್ಲಿ ಪೊಲೀಸರು, ಅಂಥವರನ್ನು ಬೇರ್ಪಡಿಸಿ ಹೆತ್ತವರಲ್ಲಿಗೆ ಕಳುಹಿಸುವುದು ಮಾಮೂಲಿ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹಾಗೂ ವಕೀಲೆ ಸುಧಾ ರಾಮಲಿಂಗಂ ಹೇಳುತ್ತಾರೆ. ಸಲಿಂಗ ದಾಂಪತ್ಯದ ವಿಷಯದಲ್ಲಿ ಪೊಲೀಸರು ಸಂವೇದನಾಶೀಲತೆ, ಕಾನೂನಿನ ಮಿತಿ ಅರಿತಿರಬೇಕು ಮತ್ತು ಅಂಥ ದಂಪತಿಯರು ತಮ್ಮ ಹಕ್ಕುಗಳ ಬಗೆಗೆ ಸ್ಪಷ್ಟವಾಗಿ ತಿಳಿದುಕೊಂಡಿರಬೇಕು ಎಂದು ರಾಮಲಿಂಗಂ ಹೇಳುತ್ತಾರೆ.


ಅವರು ತಮ್ಮ ಹೆತ್ತವರಲ್ಲಿಗೆ ಹಿಂದಿರುಗಲು ತೆಗೆದುಕೊಂಡ ತೀರ್ಮಾನದ ಹಿಂದೆ ಯಾವ ಒತ್ತಡ ಇತ್ತು ಎಂದು ನಮಗೆ ಗೊತ್ತಿಲ್ಲ. ಇಬ್ಬರು ಹೆಣ್ಣುಗಳು ಓಡಿ ಹೋಗಿ ಒಟ್ಟಿಗೆ ಬದುಕುವುದೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂಥ ಸಂದರ್ಭಗಳಲ್ಲಿ ಆ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲು ಪೊಲೀಸರು ಕೌನ್ಸೆಲರ್ ಗಳ, ವಕೀಲರ ನೆರವನ್ನು ಸಹ ಪಡೆಯಬೇಕು ಎಂದು ಸುಧಾ ಹೇಳುತ್ತಾರೆ.



Join Whatsapp