ಲಕ್ನೋ: ಸಮಾಜವಾದಿ ಪಕ್ಷದ ಮುಖಂಡರೊಬ್ಬರನ್ನು ಥಳಿಸಿ ಹತ್ಯೆಗೈದಿರುವ ಘಟನೆ ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ರೇವ್ತಾಪುರ ಪ್ರದೇಶದಲ್ಲಿ ನಡೆದಿದೆ.
ರೋಹಿತ್(26) ಎಂಬಾತ ಮೃತ ದುರ್ದೈವಿ. ಎಸ್ ಪಿಯ ಯುವ ಘಟಕದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿರುವ ರೋಹಿತ್ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ದುಷ್ಕರ್ಮಿಗಳು ಕಬ್ಬಿಣದ ರಾಡ್, ಹರಿತವಾದ ಆಯುಧಗಳು ಮತ್ತು ಲಾಠಿಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಚಿನ್, ಶಿವಕುಮಾರ್ ಮತ್ತು ಇತರರು ತಮ್ಮ ಮಗನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮೃತರ ತಾಯಿ ಊರ್ಮಿಳಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಸಚಿನ್ ಗೆ ರೋಹಿತ್ ಜೊತೆ ಹಳೆ ವೈಷಮ್ಯವಿದ್ದು, ಹಲವು ಬಾರಿ ಬೆದರಿಕೆ ಹಾಕಿದ್ದ ಎಂದು ಅವರು ಆರೋಪಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಟೋನ್‌ಮೆಂಟ್ ಸಹಾಯಕ ಪೊಲೀಸ್ ಕಮಿಷನರ್ ಅರ್ಚನಾ ಸಿಂಗ್ ಹೇಳಿದ್ದಾರೆ.