ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದ, ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೊಬೈಲ್ ಸಂಖ್ಯೆಯಿಂದ ಮುಂಬೈ ಸಂಚಾರ ಪೊಲೀಸರಿಗೆ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸೋಮವಾರ ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್‌ಆ್ಯಪ್ ಸಹಾಯವಾಣಿಗೆ ಕ್ಷಮೆಯಾಚನೆಯ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಲು ಬಳಸಿದ ಅದೇ ಮೊಬೈಲ್ ಸಂಖ್ಯೆಯಿಂದ ಕ್ಷಮೆಯಾಚನೆ ಸಂದೇಶ ಕಳುಹಿಸಿರುವುದು ತನಿಖೆಯ ವೇಳೆ ದೃಢಪಟ್ಟಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಕಳೆದ ವಾರ ಇದೇ ವಾಟ್ಸ್‌ಆ್ಯಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ಬಂದಿತ್ತು. ಸಲ್ಮಾನ್ ಖಾನ್ ಜೀವಂತವಾಗಿ ಇರಬೇಕಾದರೆ ಮತ್ತು ಲಾರೆನ್ಸ್ ಬಿಷ್ಣೋಯಿ ಜೊತೆಗಿನ ವೈರತ್ವವನ್ನು ಕಳೆದುಕೊಳ್ಳಬೇಕಾದರೆ ₹5 ಕೋಟಿ ನೀಡಬೇಕು. ಈ ಸಂದೇಶವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಏಪ್ರಿಲ್ ತಿಂಗಳಿನಲ್ಲಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಎದುರು ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಗುಂಡು ಹಾರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.