U-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ | ಪದಕ ಗೆದ್ದು ಇತಿಹಾಸ ನಿರ್ಮಿಸಿದ ಸಜನ್ ಭನ್ವಾಲ್‌

Prasthutha|

ವೀಸಾ ವಿವಾದದ ನಡುವೆಯೇ ಸ್ಪೇನ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಜನ್ ಭನ್ವಾಲ್‌ ಐತಿಹಾಸಿಕ ಸಾಧನೆ ಮರೆದಿದ್ದಾರೆ.

- Advertisement -

ಗ್ರೀಕೋ ರೋಮನ್ ವಿಭಾಗದ 77 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಜನ್, U-23 ಕೂಟದಲ್ಲಿ ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಿಪಿಚೇಜ್​ ಸುತ್ತು ಕೊನೆಗೊಂಡಾಗ ಭಾರತದ ಸಜನ್ ಮತ್ತು ಉಕ್ರೇನ್​ನ ಡಿಮಿಟ್ರೊ ವಸೆಟ್​​ಸ್ಕಿ ತಲಾ 10- 10 ಅಂಕಗಳಿಂದ ಸಮಬಲ ಸಾಧಿಸಿದ್ದರು. ಆದರೆ ಅಂತಿಮ ಅಂಕ ಗಳಿಸಿದ ಅನುಕೂಲ ಪಡೆದ ಸಜನ್‌, ಕಂಚಿನ ಪದಕಕ್ಕೆ ಕೊರೊಳೊಡ್ಡಿದರು. ಪಂದ್ಯದ ಪ್ರಾರಂಭದಲ್ಲಿ ಉಕ್ರೇನಿಯನ್‌ ಕುಸ್ತಿಪಟು 10-4 ಅಂತರದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದರು. ಆದರೆ ‘ಪಾರ್ ಟೆರ್ರೆ’ ವಿಧಾನದ ಮೂಲಕ ರಕ್ಷಣಾ ವಿಭಾಗಕ್ಕೆ ಹೆಚ್ಚು ಒತ್ತು ನೀಡಿದ ಭಾರತೀಯ ಕುಸ್ತಿಪಟು ಡಿಮಿಟ್ರೊ ಮುನ್ನಡೆಗೆ ಅಡ್ಡಿಯಾದರು. ಅಂತಿಮ 35 ಸೆಕೆಂಡ್‌ಗಳಲ್ಲಿ ಹಿನ್ನಡೆಯಿಂದ ಪುಟಿದೆದ್ದು ಬಂದ ಸಜನ್‌ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದ್ದರು.

- Advertisement -

ಲಿಥುವೇನಿಯಾದ ಐಸ್ಟಿಸ್ ಲಿಯಾಗ್ಮಿನಾಸ್ ವಿರುದ್ಧ 3-0 ಗೆಲುವಿನೊಂದಿಗೆ ಮುನ್ನಡೆದಿದ್ದ ಸಜನ್ ಭನ್ವಾಲಾ, ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಮೊಲ್ಡೊವಾದ ಅಲೆಕ್ಸಾಂಡ್ರಿನ್ ಗುಟು ವಿರುದ್ಧ 0-8 ಅಂತರದಲ್ಲಿ ಸೋತಿದ್ದರು. ಆದರೆ ರಿಪಿಚೇಜ್​ ಸುತ್ತಿನಲ್ಲಿ ಕಝಾಕಿಸ್ತಾನ್‌ನ ರಸುಲ್ ಝುನಿಸ್ ವಿರುದ್ಧ 9- 6 ಗೆಲುವು ಸಾಧಿಸಿ ಪದಕ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆದರು.

ಮತ್ತೊಂದೆಡೆ 72 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತ ವಿಕಾಸ್, ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಜಾರ್ಜಿಯಾದ ಥಿಯೋಡೊರೊಸ್ ಸೊಟಿರಿಯಾಡಿಸ್ ಮತ್ತು ಜಪಾನ್‌ನ ಡೈಗೊ ಕೊಬಯಾಶಿ ನಡುವಿನ ರಿಪೆಚೇಜ್ ಸ್ಪರ್ಧೆಯ ವಿಜೇತರನ್ನು ವಿಕಾಸ್‌ ಎದುರಿಸಲಿದ್ದಾರೆ.

ವೀಸಾ ತಿರಸ್ಕಾರ ವಿವಾದ

23 ವರ್ಷದೊಳಗಿನವರ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸ್ಪೇನ್‌ಗೆ ತೆರಳಬೇಕಿದ್ದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಗಳನ್ನು, ಭಾರತದಲ್ಲಿನ ಸ್ಪ್ಯಾನಿಷ್ ರಾಯಭಾರ ಕಚೇರಿಯು ಸೋಮವಾರ ತಿರಸ್ಕರಿಸಿತ್ತು. ಆಟಗಾರರ ಹೊರತಾಗಿ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ ಪ್ರಸಾದ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಅಲ್ಕಾ ತೋಮರ್ ಸೇರಿದಂತೆ ಹಲವು ತರಬೇತುದಾರರಿಗೂ ವೀಸಾ ನೀಡಲು ಸ್ಪ್ಯಾನಿಷ್ ರಾಯಭಾರ ಕಚೇರಿ ನಿರಾಕರಿಸಿತ್ತು.



Join Whatsapp