ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಇಂದು (ಮಂಗಳವಾರ) ಮಧ್ಯಾಹ್ನ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜ.16ರಂದು ಮುಂಬೈನ ಬಾಂದ್ರಾದಲ್ಲಿರುವ ‘ಸದ್ಗುರು ಶರಣ್’ ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿರುವ ನಿವಾಸದಲ್ಲಿ 54 ವರ್ಷದ ಸೈಫ್ ಅಲಿ ಖಾನ್ ದುಷ್ಕರ್ಮಿಯೊಬ್ಬರಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಸೈಫ್ ಅವರ ಬೆನ್ನೆಲುಬಿಗೆ ಗಂಭೀರ ಗಾಯವಾಗಿದ್ದು, ಅಲ್ಲಿ ಹೊಕ್ಕಿದ್ದ ಚಾಕು ಹೊರತೆಗೆಯಲು ಮತ್ತು ಬೆನ್ನುಮೂಳೆಯ ಮಜ್ಜೆಯನ್ನು ಸರಿಪಡಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸೈಫ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಆರೋಪಿ ಶರೀಫುಲ್ ಇಸ್ಲಾಂ ಶಹಜಾದ್ ನನ್ನು ಬಂಧಿಸಿದ್ದು, ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.