ಮಂಗಳೂರು: ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಾಂಬೂರಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ BJPಯನ್ನು ಹೊಗಳಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಅಣಕಿಸಿರುವ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಇದಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನದಲ್ಲಿ ಮಹಾತ್ಮ ಗಾಂಧಿಯವರನ್ನು ಬಿಟ್ಟು ಹೇಡಿ ಸಾವರ್ಕರ್ ಫೋಟೋ ಪ್ರದರ್ಶಿಸಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಭಾರತ್ ಸ್ಕೌಟ್ & ಗೌಡ್ಸ್ ಮತ್ತು ಆಳ್ವಾಸ್ ಸಂಸ್ಥೆ ಮೂಡಬಿದ್ರಿ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ ಮಾಡುವ ಅಂತಾರಾಷ್ಟ್ರೀಯ ಜಾಂಬೂರಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ BJPಯ ಅಜೆಂಡಾದಂತೆ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿರುವ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಡಿ.22 ರಿಂದ ಮೂಡುಬಿದಿರೆಯ ಆಳ್ವಾಸ್ ನಲ್ಲಿ ನಡೆಯುತ್ತಿರುವ ಸ್ಕೌಟ್ಸ್–ಗೈಡ್ಸ್’ನ ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಎರಡನೇ ದಿನ ನಡೆದ ಕಲಾಮೇಳದಲ್ಲಿ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಈ ಕಾರ್ಯಕ್ರಮ ಡಿ.27 ರವರೆಗೆ ನಡೆಯಲಿದೆ.
ಸೌಹಾರ್ದತೆ ಮತ್ತು ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಜಾಂಬೂರಿಯಂತಹ ಕಾರ್ಯಕ್ರಮದಲ್ಲಿ ಒಂದು ಪಕ್ಷದ ಪರವಾಗಿ ಹಾಗೂ ಇತರ ಪಕ್ಷಗಳ ವಿರುದ್ಧವಾಗಿ ಮಕ್ಕಳಲ್ಲಿ ದ್ವೇಷ ಬಿತ್ತುವ ಕಾರ್ಯಕ್ರಮ ನಡೆಯುತ್ತಿರುವುದು ವಿಷಾದನೀಯ ಎಂದು ಹಲವು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.