ವಾಟ್ಫೋರ್ಡ್ ; ಲಿವರ್‌ಪೂಲ್’ನ ಸ್ಟಾರ್ ಸ್ಟ್ರೈಕರ್ ಸಾಡಿಯೊ ಮಾನೆ ಇಂಗ್ಲಿಷ್ ಪ್ರೀಮಿಯರ್ ಲೀಗ್’ನಲ್ಲಿ 100ನೇ ಗೋಲು ದಾಖಲಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. ಯಾವುದೇ ಪೆನಾಲ್ಟಿ ಶೂಟ್’ಔಟ್ ಸಹಾಯವಿಲ್ಲದೆ ಮಾನೆ 100 ಗೋಲು ದಾಖಲಿಸಿರುವುದು ವಿಶೇಷ.
ಇಂಗ್ಲಿಷ್ ಪ್ರಿಮಿಯರ್ ಲೀಗ್’ನಲ್ಲಿ ಶನಿವಾರ ನಡೆದ ವಾಟ್’ಫೋರ್ಡ್ ವಿರುದ್ಧದ ಪಂದ್ಯವನ್ನು ಲಿವರ್‌ಪೂಲ್ 5-0 ಗೋಲುಗಳ ಅಂತರದಲ್ಲಿ ಭರ್ಜರಿಯಾಗಿಯೇ ಗೆದ್ದು ಬೀಗಿತ್ತು. ಈ ಪಂದ್ಯದ 8ನೇ ನಿಮಿಷದಲ್ಲಿ ಮೊಹಮ್ಮದ್ ಸಲಾಹ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಸಾಡಿಯೊ ಮಾನೆ ಇಪಿಎಲ್’ ಲೀಗ್’ನಲ್ಲಿ ತಮ್ಮ 100ನೇ ಗೋಲ್’ಅನ್ನು ಪೂರ್ತಿಗೊಳಿಸಿದರು. ಆ ಮೂಲಕ ಇಂಗ್ಲಿಷ್ ಪ್ರೀಮಿಯರ್ ಲೀಗ್’ನಲ್ಲಿ ಇ ಸಾಧನೆ ಮಾಡಿದ ಮೂರನೇ ಆಫ್ರಿಕನ್ ಆಟಗಾರ ಎನಿಸಿದರು.
ಇದಕ್ಕೂ ಮೊದಲು ಚೆಲ್ಸಿಯಾ ತಂಡದ ಲೆಜೆಂಡ್ ಆಟಗಾರ ದಿದಿಯರ್ ಡ್ರೋಗ್ಬಾ ಹಾಗೂ ಲಿವರ್‌ಪೂಲ್’ನ ಸ್ಟಾರ್ ಆಟಗಾರ ಮೊಹಮ್ಮದ್ ಸಲಾಹ್ ಇಪಿಎಲ್ ಟೂರ್ನಿಯಲ್ಲಿ 100 ಗೋಲು ದಾಖಲಿಸಿದ ಆಫ್ರಿಕಾದ ಆಟಗಾರರಾಗಿದ್ದಾರೆ.ವಾಟ್ ಫೋರ್ಡ್ ವಿರುದ್ಧದ ಪಂದ್ಯದಲ್ಲಿ ರೊಬರ್ಟೊ ಫರ್ಮಿನೋ ಹ್ಯಾಟ್ರಿಕ್ ಗೋಲು ದಾಖಲಿಸಿ ಮಿಂಚಿದ್ದರು. ಪಂದ್ಯದ 37, 52 ಹಾಗೂ ಹೆಚ್ಚವರಿ ಸಮಯದಲ್ಲಿ [ 90+1] ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಾಡಿಯೊ ಮಾನೆಯ ಗೋಲ್ ಆಸಿಸ್ಟ್ ಮಾಡಿದ್ದ ಮೊಹಮ್ಮದ್ ಸಲಾಹ್ 54ನೇ ನಿಮಿಷದಲ್ಲಿ ಆಕರ್ಷಕ ಗೋಲು ದಾಖಲಿಸಿ ಮಿಂಚಿದರು.
ಈ ಗೆಲುವಿನ ಮೂಲಕ ಲೀಗ್’ನಲ್ಲಿ 8 ಪಂದ್ಯಗಳನ್ನು ಪೂರ್ತಿಗೊಳಿಸಿದ ಲಿವರ್‌ಪೂಲ್ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. 8 ಪಂದ್ಯಗಳಿಂದ 19 ಅಂಕಗಳೊಂದಿಗೆ ಚೆಲ್ಸಿಯಾ ಮೊದಲನೇ ಹಾಗೂ 8 ಪಂದ್ಯಗಳಲ್ಲಿ 17 ಅಂಕಗಳನ್ನು ಸಂಪಾದಿಸಿರುವ ಮ್ಯಾಂಚೆಸ್ಟರ್ ಸಿಟಿ ತಂಡವು ಮೂರನೇ ಸ್ಥಾನದಲ್ಲಿದೆ