ಜೈಪುರ: ಬಿಜೆಪಿ ಕಾಲದ ಭ್ರಷ್ಟಾಚಾರಗಳ ಬಗ್ಗೆ ಅಶೋಕ್ ಗೆಹ್ಲೋಟ್ ಸರಕಾರವು ಏನೂ ಮಾಡುತ್ತಿಲ್ಲ ಎಂದು ಆಪಾದಿಸಿ ಕಾಂಗ್ರೆಸ್ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಸ್ವ ಪಕ್ಷದ ಸರ್ಕಾರದ ವಿರುದ್ಧ ಒಂದು ದಿನದ ಉಪವಾಸಕ್ಕೆ ಕುಳಿತಿದ್ದಾರೆ.
ಜೈಪುರದ ಶಹೀದ್ ಸ್ಮಾರಕದಲ್ಲಿ ತಮ್ಮ ಬೆಂಬಲಿಗರೊಡನೆ ಸಚಿನ್ ಪೈಲಟ್ ದಿನದ ಉಪವಾಸ ನಡೆದಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ಇದು ಪಕ್ಷ ವಿರೋಧಿ ಕೆಲಸ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಈ ಉಪವಾಸ ಪಕ್ಷದ ಒಳಿತಿಗೆ ಅನುಕೂಲಕರವಲ್ಲ ಎಂದೂ ಅವರು ಹೇಳಿದರು.
ಇಂತಿಪ್ಪ ಹತ್ತಂಶಗಳ ಕಾಳಜಿ ಕಾಳಗ
1 ಈ ವರುಷಾಂತ್ಯದಲ್ಲಿ ವಿಧಾನ ಸಭೆ ಚುನಾವಣೆ ಇರುವ ರಾಜಸ್ತಾನದಲ್ಲಿ ಸಚಿನ್ ಪೈಲಟ್ ಮತ್ತೆ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆಗೆ ಒತ್ತು ನೀಡಿದ್ದಾರೆ.
2 ಪೈಲಟ್ ಜೊತೆ ಫೋನ್ ನಲ್ಲಿ ಮಾತನಾಡಿದರೂ ಉಪವಾಸ ಹಿಂತೆಗೆದುಕೊಳ್ಳಲು ರಾಂಧವಾ ಹೇಳಿಲ್ಲ ಎನ್ನಲಾಗಿದೆ. ಇಲ್ಲಿ ವಸುಂಧರಾ ರಾಜೇ ಕಾಲದ ಭ್ರಷ್ಟಾಚಾರದ ವಿರುದ್ಧ ಎಂಬುದು ಒಳ ತಿರುಳು.
3 ರಾಹುಲ್ ಗಾಂಧಿಯವರು ಅದಾನಿಯವರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿಲ್ಲವೆ, ಇದೂ ಹಾಗೇ ಎನ್ನುವುದು ಪೈಲಟಾಭಿಮಾನಿಗಳ ಮಾತು.
4 ನನ್ನದು ಮೌನ ವ್ರತ, ಸರಕಾರದ ವಿರುದ್ಧ ಮಾತಿಲ್ಲ ಎಂದರು ಪೈಲಟ್.
5 ಅಶೋಕ್ ಗೆಹ್ಲೋಟ್ ಅವರು ಬಿಜೆಪಿ ಕಾಲದ ಭ್ರಷ್ಟಾಚಾರದ ವಿರುದ್ಧ ಏನೂ ಮಾಡುತ್ತಿಲ್ಲ ಎನ್ನುವುದು ತಪ್ಪಭಿಪ್ರಾಯ ಎನ್ನುತ್ತಾರೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ.
6 ರಾಜಸ್ತಾನದ ಬಿಜೆಪಿ ಕೇಂದ್ರ ನಾಯಕ ಗಜೇಂದ್ರ ಸಿಂಗ್ ಶೆಖಾವತ್ ವಿರುದ್ಧ ಸಂಜೀವಿ ಹಗರಣದಲ್ಲಿ ತನಿಖೆ ನಡೆದಿದೆ. ಆ ಕೇಂದ್ರ ಮಂತ್ರಿ ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧ ಮಾನಹಾನಿ ಖಟ್ಲೆ ಹಾಕಿದ್ದಾರೆ.
7 ಅಶೋಕ್ ಗೆಹ್ಲೋಟ್ ಸರಕಾರದ ಸಾಧನೆ ವಿರುದ್ಧ ಮಾತನಾಡುವ ಯಾರನ್ನೂ ಬೆಂಬಲಿಸಬೇಡಿ ಎಂದು ರಾಜಸ್ತಾನದ ಸಂಪುಟ ಸಚಿವರೊಬ್ಬರು ಹೇಳಿದರು.
8 ಬೆಳಿಗ್ಗೆ ಸಚಿನ್ ಜೊತೆ ಯಾವುದೇ ಮಂತ್ರಿ ಇಲ್ಲವೇ ಶಾಸಕ ಕಂಡು ಬರಲಿಲ್ಲ. ಒಂದಿಬ್ಬರು ಶಾಸಕರು ಒಳ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
9 ರಾಜ್ಯದ ಮುಖ್ಯಮಂತ್ರಿಯಾಗಲು ಪ್ರಯತ್ನಿಸುವವರಿಗೆ ಪಕ್ಷವೇ ಅಶೋಕ್ ಗೆಹ್ಲೋಟ್ ರನ್ನು ಮುಖ್ಯಮಂತ್ರಿ ಮಾಡಿದೆ ಎನ್ನುವ ಅರಿವು ಇರಬೇಕು ಎಂದು ಕಂದಾಯ ಮಂತ್ರಿ ರಾಮ್ ಲಾಲ್ ಜಾತ್ ಹೇಳಿದರು.
10 ಗೆಹ್ಲೋಟ್ ರ ಸರಕಾರವು ಜನಪರ ಕೆಲಸಗಳನ್ನು ಮಾಡಿದೆ, ಅದರಲ್ಲಿ ಎಲ್ಲ ಕಾಂಗ್ರೆಸ್ಸಿಗರ ಪ್ರಯತ್ನವೂ ಇದೆ ಎಂದೂ ಕಾಂಗ್ರೆಸ್ ಹೇಳಿದೆ.