ಶಾಫಿ ಸಅದಿ ವಿರುದ್ಧದ ಆರೋಪಗಳು ಸುಳ್ಳು : ಸಅದಿಯಾ ಫೌಂಡೇಶನ್ ಸ್ಪಷ್ಟನೆ; ಕಾನೂನು ಹೋರಾಟಕ್ಕೆ ಚಿಂತನೆ

Prasthutha|

ಬೆಂಗಳೂರು : ನಗರದ ಬನಶಂಕರಿ ಹಾಗೂ ಬನ್ನೇರುಘಟ್ಟಗಳಲ್ಲಿ ವಿವಿಧ ವಿದ್ಯಾಲಯಗಳನ್ನು ನಡೆಸುತ್ತಿರುವ ಬೆಂಗಳೂರು ಸಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿಯವರು ವಕ್ಫ್ ಅನುದಾನ ದುರುಪಯೋಗ ಮಾಡಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ.

- Advertisement -

ಶಾಫಿ ಸಅದಿ ಮೊದಲ ಬಾರಿಗೆ ರಾಜ್ಯ ವಕ್ಫ್ ಬೋರ್ಟ್ ಗೆ ಸದಸ್ಯರಾಗಿದ್ದು 2011ರಲ್ಲಿ. ಅಲ್ಲಿಂದೀಚೆಗೆ ಎರಡು ಅವಧಿಗೆ ಅವರು ರಾಜ್ಯ ವಕ್ಫ್ ಸದಸ್ಯರಾಗಿದ್ದಾರೆ. ಸಅದಿಯಾ ಸಂಸ್ಥೆ ಇದಕ್ಕೂ ಮೊದಲು ವಕ್ಫ್ ಬೋರ್ಡ್ ನಿಂದ ಯಾವುದೇ ಧನಸಹಾಯ ಪಡೆದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಸ್ಲಮ್ ಮಕ್ಕಳು ಸಹಿತ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಬೆಂಗಳೂರು ಸಅದಿಯಾ ಸಂಸ್ಥೆಯ ಬನ್ನೇರುಘಟ್ಟ ಶಾಖೆಯ ಮಸೀದಿ ಕಟ್ಟಡದ ದುರಸ್ತಿಗೆ ಧನಸಹಾಯದ ಅಗತ್ಯವಿತ್ತು. ಸುಮಾರು ನಾಲ್ಕೂವರೆ ಕೋಟಿ ರೂ. ಮೌಲ್ಯದ ಮಸೀದಿ ಮದ್ರಸ ಕಟ್ಟಡ ಹೊಂದಿರುವ ಬನ್ನೇರುಘಟ್ಟದ ಮಸೀದಿಯನ್ನು ವಕ್ಫ್ ಗೆ ನೋಂದಾಯಿಸಲಾಗಿದೆ. ಮಸೀದಿ ದುರಸ್ತಿ ಹಾಗೂ ಅಭಿವೃದ್ಧಿಗೆ ಅನುದಾನ ಬಯಸಿ ಸಅದಿಯಾ ಸಂಸ್ಥೆಯು ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅದರಂತೆ ಕಂಪೌಂಡ್ ನಿರ್ಮಾಣಕ್ಕೆ 19 ಲಕ್ಷ ರೂ. ಸರಕಾರದಿಂದ ಮಂಜೂರಾಗಿತ್ತು. ಅದರ ಮೊದಲ ಕಂತು 5 ಲಕ್ಷ ರೂ. ಸಅದಿಯಾ ಆಡಳಿತ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಅದೇ ಸಂದರ್ಭಕ್ಕೆ ಕೆಲವರಿಂದ ಇದಕ್ಕೆ ಆಕ್ಷೇಪ ಕೇಳಿಬಂತು. ಈ ಬಗ್ಗೆ ಮಾಹಿತಿ ಅರಿತ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿಯವರು ವಕ್ಫ್ ಬೋರ್ಡ್ ಸದಸ್ಯರೂ ಆಗಿರುವುದರಿಂದ; ಅವರೇ ಸ್ವತಃ ವಕ್ಫ್ ಬೋರ್ಡ್ ಸಿಇಒ ಅವರನ್ನು ಸಂಪರ್ಕಿಸಿ ಆಕ್ಷೇಪಗಳ ಬಗ್ಗೆ ಇತ್ಯರ್ಥ ಆಗುವವರೆಗೆ ಅನುದಾನವನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ ಎಂದು ಸಅದಿಯಾ ಎಜುಕೇಶನಲ್ ಫೌಂಡೇಶನ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.

- Advertisement -

ಹೀಗಾಗಿ, ಸಅದಿ ಅವರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಶಾಫಿ ಸಅದಿಯವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸಂಸ್ಥೆಯ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಮೇಲೆ ಸುಳ್ಳಾರೋಪ ಹೊರಿಸಿ ಮಾನಹಾನಿ ಮಾಡಿರುವವರ ವಿರುದ್ಧ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.



Join Whatsapp