ಟೌನ್ಸ್‌ವಿಲ್ಲೆ: ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಜಿಂಬಾಬ್ವೆ, ಕಾಂಗಾರೂ ನಾಡಿನಲ್ಲಿ ಚೊಚ್ಚಲ ಗೆಲುವಿನ ಸಂಭ್ರಮವನ್ನಾಚರಿಸಿದೆ. ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.
ಐರ್ಲೆಂಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಕೇವಲ 141 ರನ್‌ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಸುಲಭ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ 7 ವಿಕೆಟ್ ನಷ್ಟದಲ್ಲಿ 39 ಓವರ್‌ಗಳಲ್ಲಿ ಸ್ಮರಣೀಯ ಗೆಲುವು ಸಾಧಿಸಿತು. ಈ ಮೂಲಕ ಕ್ಲೀನ್ ಸ್ವೀಪ್ ನಿರೀಕೆಯಲ್ಲಿದ್ದ ಆಸ್ಟ್ರೇಲಿಯಾಗೆ ಅನಿರೀಕ್ಷಿತ ಆಘಾತ ನೀಡಿದೆ.
ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಸಾಧಿಸಿದ ಮೂರನೇ ಗೆಲುವು ಇದಾಗಿದೆ. ಇದಕ್ಕೂ ಮೊದಲು 2014ರಲ್ಲಿ ಹರಾರೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೂರು ವಿಕೆಟ್ ಅಂತರದಲ್ಲಿ ಜಿಂಬಾಬ್ವೆ ಮಣಿಸಿತ್ತು. ಇದಾದ ಎಂಟು ವರ್ಷಗಳ ಬಳಿಕ ಆಸೀಸ್ ವಿರುದ್ಧ ಜಿಂಬಾಬ್ವೆ ವಿಜಯ ಪತಾಕೆ ಹಾರಿಸಿದೆ.
ಬಲಿಷ್ಠ ಆಸ್ಟ್ರೇಲಿಯಾಗೆ ತೀವ್ರ ಮುಖಭಂಗ
ಮೊದಲೆರಡು ಪಂದ್ಯಗಳನ್ನ ಗೆದ್ದು ಏಕದಿನ ಸರಣಿ ವಶಪಡಿಸಿಕೊಂಡಿದ್ದ ಆಸ್ಟ್ರೇಲಿಯಾಗೆ ಮೂರನೇ ಪಂದ್ಯದಲ್ಲಿ ಭಾರೀ ಮುಖಭಂಗವಾಗಿದೆ. ಲೆಗ್ ಸ್ಪಿನ್ನರ್ ರಯಾನ್ ಬರ್ಲ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್‌ಗಳ ಬಳಿ ಉತ್ತರವಿರಲಿಲ್ಲ. ಬರ್ಲ್ 3 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕಾಂಗರೂಗಳಿಗೆ ಶಾಕ್ ನೀಡಿದ್ರು. ಬ್ರಾಡ್ ಇವಾಸ್ 2 ವಿಕೆಟ್ ಪಡೆದರು.
ವಾರ್ನರ್ 94 ರನ್ !
ಆಸ್ಟ್ರೇಲಿಯಾ 140 ರನ್‌ಗಳಿಸುವಷ್ಟರಲ್ಲೇ ಆಲೌಟ್ ಆಗಿದ್ದರೂ. ಆರಂಭಿಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟ ನಡೆಸಿದರು. 96 ಎಸೆತಗಳನ್ನು ಎದುರಿಸಿದ ವಾರ್ನರ್, 2 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 94 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ 19 ರನ್‌ಗಳಿಸಿದರು. ಉಳಿದ 9 ಮಂದಿ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತವನ್ನೇ ತಲುಪಲಿಲ್ಲ.
ಗೆಲುವಿನ ರುವಾರಿ ನಾಯಕ ರೆಗಿಸ್ ಚಕಬ್ವಾ
ಆಸ್ಟ್ರೇಲಿಯಾದ 142ರನ್‌ಗಳ ಸುಲಭ ಗುರಿಯನ್ನ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆದಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೈ ಕೊಟ್ಟರು. ಕೊನೆಯಲ್ಲಿ 72 ಎಸೆತಗಳನ್ನು ಎದುರಿಸಿದ ನಾಯಕ ರೆಗಿಸ್ ಚಕಬ್ವಾ, 37 ರನ್‌ಗಳಿಸಿ ತಂಡವನ್ನು ಐತಿಹಾಸಿಕ ಗೆಲುವಿನ ಗುರಿ ತಲುಪಿಸಿದರು.