ಕೀವ್: ಉಕ್ರೇನ್ ನ ಕೆಲವು ನಗರಗಳಲ್ಲಿ ಕದನ ವಿರಾಮ ಘೋಷಿಸಿರುವ ರಷ್ಯಾ, ತನ್ನ ದಾಳಿಯನ್ನು ಮುಂದುವರಿಸಿದೆ. ಸೋಮವಾರವೂ ಹಲವು ನಗರಗಳಲ್ಲಿ ಶೆಲ್, ವೈಮಾನಿಕ ದಾಳಿಗಳು ನಡೆದಿದ್ದು, ಕೀವ್‌ನ ಸಮೀಪದ ಗೋಸ್ಟೋಮೆಲ್‌ನಲ್ಲಿ ರಷ್ಯಾ ಪಡೆಗಳು ಹತ್ಯೆಗೈದಿವೆ.
ಈ ಮಧ್ಯೆ ಉಕ್ರೇನ್ ನ ಮರಿಯುಪೋಲ್‌ನಲ್ಲಿ ರಷ್ಯಾ ಈಗಾಗಲೇ 3 ಬಾರಿ ಕದನ ವಿರಾಮ ಘೋಷಿಸಿದ್ದು, ಮೂರೂ ಬಾರಿಯೂ ಅದು ಉಲ್ಲಂಘನೆಯಾದ ಕಾರಣ ನಾಗರಿಕರ ಸ್ಥಳಾಂತರಕ್ಕೆ ತಡೆಯುಂಟುಮಾಡಿದೆ. ನಿರಂತರವಾಗಿ ಅಲ್ಲಿ ವೈಮಾನಿಕ ದಾಳಿಗಳು ನಡೆಯುತ್ತಿದ್ದು ರಷ್ಯಾ ಈ ನಗರವನ್ನು ಅತಿಕ್ರಮಿಸಿಕೊಳ್ಳಲು ಸರ್ವಪ್ರಯತ್ನ ನಡೆಸುತ್ತಿದೆ.
ಮರಿಯುಪೋಲ್ ಒಂದು ಬಂದರು ನಗರಿಯಾಗಿದ್ದು, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಬಾಹುಳ್ಯವಿರುವ ಲುಗಾಂಸ್ಕ್ ಮತ್ತು ಡಾನೆಸ್ಕ್ನಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಈ ನಗರವನ್ನು ವಶಕ್ಕೆ ಪಡೆದರೆ, ಕ್ರಿಮಿಯಾದಲ್ಲಿರುವ ತನ್ನ ಪಡೆಗಳನ್ನು ಸೇತುವೆಯ ಮೂಲಕ ಡಾನೆಸ್ಕ್ ಮತ್ತು ಲುಗಾಂಸ್ಕ್ಗೆ ಕಳುಹಿಸಲು ರಷ್ಯಾಗೆ ಸಾಧ್ಯವಾಗುತ್ತದೆ.
ಮರಿಯುಪೋಲ್ ಅನ್ನು ಕಳೆದುಕೊಂಡರೆ, ಉಕ್ರೇನ್ ತನ್ನ ನೌಕಾ ಸಂಪರ್ಕವನ್ನು ಕಳೆದುಕೊಂಡಂತಾಗುತ್ತದೆ. ಈ ಲೆಕ್ಕಾಚಾರ ಇಟ್ಟುಕೊಂಡೇ ಪುತಿನ್ ಮರಿಯುಪೋಲ್‌ನತ್ತ ದೃಷ್ಟಿ ನೆಟ್ಟಿದ್ದಾರೆ.