ಕೀವ್: ವಿಶ್ವದ ಅತಿದೊಡ್ಡ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉಕ್ರೇನ್‌ನ ‘ಆಂಟೊನೊವ್-225′ ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್ ಹೊರವಲಯದಲ್ಲಿ ಭಾನುವಾರ ನಾಶ ಮಾಡಿವೆ’ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್‌ಪ್ರೊಮ್’ ಹೇಳಿದೆ.
ದೈತ್ಯ ವಿಮಾನಕ್ಕೆ ಉಕ್ರೇನ್ ‘ಮ್ರಿಯಾ’ ಎಂದು ಹೆಸರಿಟ್ಟಿತ್ತು. ಉಕ್ರೇನ್ ಭಾಷೆಯಲ್ಲಿ ‘ಕನಸು’ ಎಂದಾಗಿದೆ.’ಉಕ್ರೇನ್ ವಾಯುಯಾನದ ಹೆಗ್ಗುರುತು ಎನಿಸಿಕೊಂಡಿದ್ದ AN-225 ಅನ್ನು ಕೀವ್ ಬಳಿಯ ಗೊಸ್ಟೊಮೆಲ್‌ನಲ್ಲಿರುವ ಆಂಟೊನೊವ್ ವಿಮಾನ ನಿಲ್ದಾಣದಲ್ಲಿ ರಷ್ಯಾದ ಆಕ್ರಮಣಕಾರರು ನಾಶಪಡಿಸಿದ್ದಾರೆ’ ಎಂದು ಉಕ್ರೊಬೋರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ, ಗಂಟೆಗೆ 850 ಕಿಲೋಮೀಟರ್ (528 ಎಂಪಿಎಚ್) ವೇಗದಲ್ಲಿ 250 ಟನ್‌ಗಳಷ್ಟು (551,000 ಪೌಂಡ್‌ಗಳು) ಸರಕುಗಳನ್ನು ಸಾಗಿಸಬಲ್ಲ ಶಕ್ತಿ ಹೊಂದಿತ್ತು. ‘ಎಎನ್ -225 ‘ಮ್ರಿಯಾ’ ವಿಶ್ವದ ಅತಿದೊಡ್ಡ ವಿಮಾನವಾಗಿತ್ತು’ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.