ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಮುಂದುವರಿಯುತ್ತಿದ್ದು, ಯುದ್ಧಪೀಡಿತ ಉಕ್ರೇನ್ ಅಂದಾಜು 60 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಹೇಳಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಝೆಲೆನ್ಸ್ಕಿ, ಶಾಂತಿ ಮರುಸ್ಥಾಪನೆಯ ಬಗ್ಗೆವಿಶ್ವಾಸವಿದೆ. ದೇಶದ ಪುನಶ್ಚೇತನಕ್ಕೆ ತಿಂಗಳಿಗೆ 7 ಶತೋಟಿ ಡಾಲರ್ ನೆರವಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಆರ್ಥಿಕ ಬುನಾದಿಯಾಗಬಹುದಾದ ಉಕ್ರೇನ್ನಡ ಪ್ರತಿಯೊಂದು ವಸ್ತುಗಳನ್ನೂ ರಷ್ಯಾ ಸೇನೆ ನಾಶಪಡಿಸುವ ಗುರಿ ಹೊಂದಿದ್ದು, ಇದರಲ್ಲಿ ರೈಲು ಹಳಿ ಮತ್ತು ನಿಲ್ದಾಣಗಳು, ಆಹಾರ ಗೋದಾಮುಗಳು, ತೈಲ ಶುದ್ಧೀಕರಣ ಘಟಕಗಳು ಸೇರಿವೆ” ಎಂದು ವಿಶ್ವಬ್ಯಾಂಕ್ ಮತ್ತು ಐಎಂಎಫ್ ಅಧಿಕಾರಿಗಳಿಗೆ ವಿಡಿಯೊ ಲಿಂಕ್ ಮೂಲಕ ಹೇಳಿದ್ದಾರೆ.
ಯುದ್ಧಪೀಡಿತ ದೇಶಕ್ಕೆ ನೆರವು ಮುಂದುವರಿಸಿರುವ ಅಮೆರಿಕ ಹೊಸದಾಗಿ 1.3 ಶತಕೋಟಿ ಡಾಲರ್ ನೆರವು, ಹೊಸ ಶಸ್ತ್ರಾಸ್ತ್ರಗಳು ಮತ್ತು ಆರ್ಥಿಕ ನೆರವನ್ನು ಘೋಷಿಸಿದೆ. ಇದರಲ್ಲಿ 800 ದಶಲಕ್ಷ ಡಾಲರ್ ಸೇನಾ ನೆರವು ಕೂಡಾ ಸೇರಿದೆ.
ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಿಟ್ಟ ಈಸ್ಟರ್ ಕದನ ವಿರಾಮ ಪ್ರಸ್ತಾವವನ್ನು ತಿರಸ್ಕರಿಸಿದ ರಷ್ಯಾ, ಹಲವು ವಾರಗಳಿಂದ ಭೀಕರ ಕದನ ನಡೆಯುತ್ತಿರುವ ಮರಿಯಪೋಲ್ ಬಂದರು ನಗರದಲ್ಲಿ ಸಂಪೂರ್ಣ ವಿಜಯ ಸಾಧಿಸಿರುವುದಾಗಿ ಹೇಳಿಕೊಂಡಿದೆ.