ಹೊಸದಿಲ್ಲಿ: ಉಕ್ರೇನ್ ಮತ್ತು ರಷ್ಯಾ ಕದನದ ಬಿಸಿ ಭಾರತಕ್ಕೂ ತಟ್ಟಿದೆ. ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ‘ಮಿಲಿಟರಿ ಕಾರ್ಯಾಚರಣೆ’ಯನ್ನು ಘೋಷಿಸುತ್ತಿದ್ದಂತೆ ಗುರುವಾರ ಕಚ್ಚಾ ತೈಲ ಬೆಲೆಗಳು ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿವೆ. ಈ ಮೂಲಕ ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿ ಕಚ್ಚಾ ತೈಲ ದರ ಈ ರೀತಿ ಏರಿಕೆಯಾಗಿದೆ.
ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಜನಾಕ್ರೋಶಕ್ಕೆ ಮಣಿದು ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ದರ 5 ರೂ., ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿತ್ತು. ಇದರ ಹಿಂದೆಯೇ ರಾಜ್ಯ ಸರಕಾರವೂ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಿತ್ತು. ಆ ಬಳಿಕ ತೈಲಬೆಲೆಯಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ.
ಪೂರ್ವ ಯುರೋಪ್‌ನಲ್ಲಿ ಪೂರ್ಣ ಪ್ರಮಾಣದ ಸಂಘರ್ಷದ ಕಳವಳ ಹೆಚ್ಚಾಗಿದ್ದು ಸೇನಾ ಕಾರ್ಯಾಚರಣೆ ಘೋಷಣೆಯಾಗುತ್ತಿದ್ದಂತೆ ಬ್ರೆಂಟ್ ಮಾದರಿಯ ಕಚ್ಚಾ ತೈಲ ದರ ಬ್ಯಾರಲ್‌ಗೆ 100.04 ಡಾಲರ್‌ಗೆ ಏರಿಕೆಯಾಗಿದೆ. ಡಬ್ಲ್ಯೂಟಿಐ ಮಾದರಿ ಕಚ್ಚಾ ತೈಲ ದರ 95.54 ಡಾಲರ್‌ಗೆ ತಲುಪಿದೆ.
ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಸದ್ಯ ಕೆಲವು ನಗರಗಳಲ್ಲಿ ತಟಸ್ಥವಾಗಿದ್ದರೆ, ಕೆಲವು ನಗರಗಳಲ್ಲಿ ಏರಿಳಿತವುಂಟಾಗಿದೆ. ಇಂದು ಕರ್ನಾಟಕ ಸಹಿತ ದೇಶದ ಪ್ರಮುಖ ನಗರಗಳಲ್ಲಿ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಲಿಲ್ಲ.ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ರಾಷ್ಟ್ರಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.