ಕೈವ್: ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ ಸ್ಫೋಟಿಸಿದ ಬೆನ್ನಲ್ಲೇ ಉಕ್ರೇನ್’ನ ಹಲವು ನಗರಗಳ ಮೇಲೆ ರಷ್ಯಾ ಮತ್ತೆ ದಾಳಿ ನಡೆಸಿದೆ. ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್’ನ ಅಧ್ಯಕ್ಷೀಯ ಮೂಲಗಳು ತಿಳಿಸಿವೆ.
ಉಕ್ರೇನ್ ಕ್ಷಿಪಣಿ ದಾಳಿಗೆ ಒಳಗಾಗಿದ್ದು, ನಮ್ಮ ದೇಶದ ಹಲವು ನಗರಗಳಲ್ಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಅಧ್ಯಕ್ಷದ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೋ ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಅವರು ಕರೆ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ಉಕ್ರೇನ್ ಮೇಲೆ ರಷ್ಯಾ 75 ಕ್ಷಿಪಣಿ ದಾಳಿಗಳನ್ನು ಉಡಾಯಿಸಿದೆ ಎಂದು ಕೈವ್ ಮೂಲಗಳು ತಿಳಿಸಿವೆ.
ರಷ್ಯಾದ ಕ್ಷಿಪಣಿಗಳು ಉಕ್ರೇನ್ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ವೀಡಿಯೋವನ್ನು ಝೆಲೆನ್ಸ್ಕಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ನಗರದ ಹಲವಾರು ಕಡೆಗಳಲ್ಲಿ ದಟ್ಟ ಹೊಗೆ ಏಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಕಳೆದ ಜೂನ್ 26ರಂದು ರಷ್ಯಾವು ಕೈವ್ ಮೇಲೆ ಕೊನೆಯ ಬಾರಿಗೆ ದಾಳಿ ನಡೆಸಿತ್ತು