ಮಾಸ್ಕೋ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಹೊರ ದೇಶಗಳ ಜನರು ಮತ್ತು ಅಲ್ಲಿನ ಪ್ರಜೆಗಳು ಸುರಕ್ಷಿತವಾಗಿ ಹೊರಹೋಗಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ರಷ್ಯಾ ಮತ್ತೆ ನಾಲ್ಕು ಕಡೆಗಳಲ್ಲಿ ಕದನ ವಿರಾಮ ಘೋಷಿಸಿದೆ.
ರಾಜಧಾನಿ ಕೀವ್ ಮತ್ತೂ ಮೂರು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ಈ ಸಂಬಂಧ ಹತ್ತು ಹೊಸ ವಿಷಯಗಳು ಮುಂದಿನಂತಿವೆ.
1. ಕೀವ್, ಖಾರ್ಕಿವ್, ಮಾರಿಯುಪೋಲ್ ಮತ್ತು ಸುಮೈ ಎಂದು ನಾಲ್ಕು ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ. ಫ್ರಾನ್ಸಿನ ಅಧ್ಯಕ್ಷ ಇಮ್ಯಾನುವೇಲ್ ಮಾಕ್ರೋನ್ ಅವರು ಮಾನವೀಯ ಕಾರಿಡಾರ್ ಗಳಿಗೆ ಮನವಿ ಮಾಡಿದ ಮೇಲೆ ಈ ಯುದ್ಧ ವಿರಾಮ ಘೋಷಿಸಿಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.
2. ಮಾರಿಯುಪೋಲ್ ನಗರದಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ನಿಂತಿದೆ. ಇದರ ನಡುವೆ ಕದನ ಉಲ್ಲಂಘಿಸಿದ್ದರಿಂದ ಅಲ್ಲಿಂದ ನಾಗರಿಕರನ್ನು ಬೇರೆ ಕಡೆಗೆ ಸಾಗಿಸಲು ಅಸಾಧ್ಯವಾಯಿತು.
3. ರಷ್ಯಾ ಕ್ಷಿಪಣಿ ಮಧ್ಯ ಉಕ್ರೇನಿನ ವಿನಿಟ್ಸಿಯಾ ವಿಮಾನ ನಿಲ್ದಾಣವನ್ನು ಧ್ವಂಸ ಮಾಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
4. ಇರ್ಪಿನ್ ನಿಂದ ಪಾರಾಗಲು ಓಡುತ್ತಿದ್ದ ಮೂವರು ನಾಗರಿಕರು ಮಾರ್ಟರ್ ಬೆಂಕಿಗೆ ಬಲಿಯಾದರು ಎಂದು ಬಿಬಿಸಿ ವರದಿ ಮಾಡಿದೆ.
5. ಉಕ್ರೇನಿನಲ್ಲಿ ನೆತ್ತರಿನ ಮತ್ತು ಕಣ್ಣೀರಿನ ಹೊಳೆ ಹರಿಯುತ್ತಿದೆ. ಇದು ಬರೇ ಮಿಲಿಟರಿ ಕಾರ್ಯಾಚರಣೆಯಲ್ಲ. ಸಾವು, ನಾಶ, ಶೋಕ ತರುವ ಯುದ್ಧವಾಗಿದೆ” ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ರಷ್ಯಾ ಮಿಲಿಟರಿ ಕಾರ್ಯಾಚರಣೆ ಅಷ್ಟೆ ಎಂಬ ಹೇಳಿಕೆಯನ್ನು ಅಲ್ಲಗಳೆದರು.
6. ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿರುವುದರಿಂದ ಜಾಗತಿಕ ಮನೋರಂಜನಾ ಜಾಲ ನೆಟ್ ಫಿಕ್ಸ್, ಅಕೌಂಟಿಂಗ್ ಸಂಸ್ಥೆಗಳಾದ ಕೆಪಿಎಂಜಿ ಮತ್ತು ಪಿಡಬ್ಲ್ಯುಸಿ, ಅಮೆರಿಕನ್ ಎಕ್ಸ್ ಪ್ರೆಸ್ ಹಣಕಾಸು ಸೇವೆ ಇವುಗಳು ರಷ್ಯಾದೊಂದಿಗಿನ ಸಂಪರ್ಕ ಕಡಿದುಕೊಂಡಿವೆ.
7. ಉಕ್ರೇನ್ ಮೇಲೆ ದಾಳಿ ಖಂಡಿಸಿ ಪುತಿನ್ ವಿರುದ್ಧ ಪ್ರತಿಭಟನೆ ನಡೆಸಿದ 4,600 ಜನರನ್ನು ಪೊಲೀಸರು ಬಂಧಿಸಿರುವುದಾಗಿ ಸ್ವತಂತ್ರ ಪ್ರತಿಭಟನಾ ಗುಂಪು ತಿಳಿಸಿದೆ.
8. ಉಕ್ರೇನಿನಲ್ಲಿ ಮಾತುಕತೆ ಮೂಲಕ ಇಲ್ಲವೇ ಯುದ್ಧದ ಮೂಲಕ ತನ್ನ ಗುರಿ ಸಾಧಿಸುವುದಾಗಿ ರಷ್ಯಾ ಅಧ್ಯಕ್ಷ ಪುತಿನ್ ಹೇಳಿದ್ದಾರೆ.
9. ಸೋಮವಾರ ಉಕ್ರೇನ್ ಮತ್ತು ರಷ್ಯಾ ನಡುವೆ ಮೂರನೆಯ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ.
10. ರಷ್ಯಾ ತನ್ನ ದಾಳಿಯನ್ನು ನಿಲ್ಲಿಸುವಂತೆ ಕೂಡಲೆ ತೀರ್ಪು ನೀಡುವಂತೆ ಉಕ್ರೇನ್ ವಿಶ್ವ ಸಂಸ್ಥೆಯ ಉನ್ನತ ಕೋರ್ಟಿಗೆ ಸೋಮವಾರ ಮನವಿ ಮಾಡಿತು. ದಾಳಿಯ ಬಗೆಗೆ ರಷ್ಯಾ ಹೇಳುತ್ತಿರುವುದು ಸರಿಯಿಲ್ಲ, ಇದೊಂದು ಜನಾಂಗೀಯ ಹತ್ಯೆ ಎನ್ನುವುದು ಉಕ್ರೇನ್ ವಾದ.