ಗುವಾಹಟಿ: ಈಶಾನ್ಯ ರಾಜ್ಯ ತ್ರಿಪುರಾದ ಉನಕೋಟಿ ಕೈಲಾಶಹರ್ ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತನೊಬ್ಬನಿಗೆ ಚೂರಿ ಇರಿದ ಘಟನೆ ವರದಿಯಾಗಿದೆ.
ಎಬಿವಿಪಿ ವತಿಯಿಂದ ನಡೆದ ಸದಸ್ಯತ್ವ ಅಭಿಯಾನದ ವೇಳೆ ಶಿಬಾಜಿ ಸೇನ್ ಗುಪ್ತಾ ಎಂಬಾತನೇ ಹಲ್ಲೆಗೊಳಗಾದ ಕಾರ್ಯಕರ್ತ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದೇ ವೇಳೆ ವಿಪರ್ಯಾ ಸವೆಂಬಂತೆ ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ , ಮಸೀದಿಗಳ ಮೇಲಿನ ದಾಳಿಗೆ ಕಾರಣವಾಗಿದ್ದ ಸಂಘಪರಿವಾರ ಈ ಚೂರಿ ಇರಿತ ಘಟನೆಯನ್ನು ಖಂಡಿಸಿದೆ.
ಕೈಲಾಶಹರ್ ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಾಲ್ಕು ಜನರಿಗಿಂತ ಹೆಚ್ಚು ಜನರು ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಎರಡು ವಿಭಿನ್ನ ಸಮುದಾಯಗಳ ನಡುವೆ ಕೆಲವು ಅಹಿತಕರ ಘಟನೆಗಳು ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೈಲಾಶಹರ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಮಾತ್ರವಲ್ಲ ಕಳೆದೆರಡು ದಿನಗಳಲ್ಲಿ ರಾಜ್ಯದಲ್ಲಿ ಕೆಲವು ಕೋಮು ಸಂಬಂಧಿತ ಘಟನೆ ನಡೆದು, ಪೊಲೀಸರು ಒಂಬತ್ತು ಪ್ರಕರಣವನ್ನು ದಾಖಲಿಸಿ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.