RSS, ಗೋಲ್ವಾಲ್ಕರ್ , ಸಾವರ್ಕರ್ ಭಾರತದ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು: ಸಿದ್ದರಾಮಯ್ಯ

Prasthutha|

ಬೆಂಗಳೂರು: ಸಾವರ್ಕರ್ ಅವರು ಭಾರತದ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ಈ ಸಾವರ್ಕರ್ ಅವರನ್ನು ಆರ್.ಎಸ್.ಎಸ್ ಆರಾಧನೆ ಮಾಡುತ್ತದೆ, ಆರ್.ಎಸ್.ಎಸ್ ನ ಸರಸಂಘಚಾಲಕರಾಗಿದ್ದ ಗೋಲ್ವಾಲ್ಕರ್ ಅವರು ವಿರೋಧ ಮಾಡಿದ್ದರು. ಆರ್ಗನೈಜರ್ ಎಂಬ ಬಿಜೆಪಿಯ ಮುಖವಾಣಿ ವಿರೋಧ ಮಾಡಿತ್ತು. ಆಗ ವಿರೋಧ ಮಾಡಿ ಈಗ ‘ಹರ್ ಘರ್ ತಿರಂಗ’ ಎಂದು ಅಭಿಯಾನ ಮಾಡೋದು ನಾಟಕವಲ್ವ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರ ಧ್ವಜದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ. ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ನಾವು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದೇವೆ, ಕಾರಣ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಬಿಜೆಪಿಗೆ ನನ್ನ ಕಂಡರೆ ಭಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಹೆದರಿದೆ. ಅದೇ ಕಾರಣಕ್ಕೆ ನನ್ನ ಜನ್ಮದಿನ ಮುಗಿದು ವಾರ ಕಳೆದರೂ ಟೀಕೆ ಮಾಡೋದು ನಿಲ್ಲಿಸಿಲ್ಲ ಎಂದು ವ್ಯಂಗ್ಯವಾಡಿದರು.

- Advertisement -

ತಗಡೂರು ರಾಮಚಂದ್ರ ರಾವ್ ಅವರು ಸ್ವಾತಂತ್ರ್ಯ ಹೋರಾಟಗಾರರು, ಅವರನ್ನು ಕರ್ನಾಟಕದ ಗಾಂಧಿ ಎನ್ನುತ್ತಾರೆ. ಹಾಗಾಗಿ ಇಂದು ತಗಡೂರಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ, ನಾನೊಬ್ಬ ಕಾಂಗ್ರೆಸಿಗನಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ. ವರುಣಾದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಬರಿ ಊಹಾಪೋಹ. ನಾನು ಇದಕ್ಕೂ ಮೊದಲು ಮಾಲೂರು, ಚಿಂತಾಮಣಿ, ಚಾಮುಂಡೇಶ್ವರಿಯಲ್ಲಿ ಪಾದಯಾತ್ರೆ ಮಾಡಿದ್ದೆ, ಈ ಎಲ್ಲಾ ಕಡೆ ಚುನಾವಣೆಗೆ ನಿಲ್ಲೋಕಾಗುತ್ತಾ? ಚುನಾವಣೆ ಹತ್ತಿರ ಬಂದಾಗ ಯಾವ ಕ್ಷೇತ್ರ ಎಂದು ಎಲ್ಲರಿಗೂ ಹೇಳ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಭಕ್ತವತ್ಸಲಂ ನೇತೃತ್ವದಲ್ಲಿ ಸಮಿತಿ ಮಾಡಿದ್ದರು, ಅವರು ಎರಡೇ ತಿಂಗಳಲ್ಲಿ ವರದಿ ನೀಡಿದ್ದಾರೆ. ಇದನ್ನು ಸರ್ಕಾರ ತೆಗೆದುಕೊಂಡಿದೆ. ಅದರ ಬದಲು ಕಾಂತರಾಜ್ ಅವರ ಸಮಿತಿ ನೀಡಿದ್ದ ವರದಿ ಪಡೆಯಬೇಕಿತ್ತು. ಕಾರಣ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮೂರು ಹಂತದ ಪರೀಕ್ಷೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ನಿರ್ಣಯದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಹಿಂದುಳಿದ ಜಾತಿಗಳ ಬಗ್ಗೆ ಕರಾರುವಕ್ಕಾದ ಮಾಹಿತಿ ಇರಬೇಕು, ಇದಕ್ಕಾಗಿ ಒಂದು ನಿರ್ದಿಷ್ಟ ಕಮಿಷನ್ ರಚಿಸಿ, ಅವರು ವರದಿ ನೀಡಬೇಕು. ಈ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿದರೆ ಮಾತ್ರ ಮೀಸಲಾತಿ ನೀಡಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಳೆಯಿಂದ ಸಾವಿರಾರು ಕೋಟಿ ನಷ್ಟವಾಗಿದೆ. ಸುಮಾರು ಒಂದು ಲಕ್ಷ ಹೆಕ್ಟೇರ್ ಗೂ ಹೆಚ್ಚಿನ ಬೆಳೆ ನಷ್ಟವಾಗಿದೆ. ಈ ಬಗ್ಗೆ ಮುಂದೆ ಇನ್ನಷ್ಟು ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಹಿಂದ ಮತಗಳನ್ನು ತೆಗೆದುಹಾಕುವ ಕೆಲಸ ನಡೀತಿದೆ ಎಂದು ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ವರ್ಗದ ಜನರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ ಎಂದು ತೆಗೆದು ಹಾಕುತ್ತಾರೆ ಅನ್ನಿಸುತ್ತೆ. ಚುನಾವಣೆ ಗೆಲ್ಲಲು ಏನನ್ನೂ ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಾಂಗ್ರೆಸ್ ನವರು. ಆರ್.ಎಸ್.ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತಾ, ಜನಸಂಘ ಹುಟ್ಟಿದ್ದು 1951 ರಲ್ಲಿ, ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೊತ್ತಾ? ಆರ್.ಎಸ್.ಎಸ್ ನವರು ಯಾರಾದ್ರೂ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಸಂಘದ ಸ್ಥಾಪಕರಾದ ಹೆಡ್ಗೆವಾರ್, ಗೋಲ್ವಾಲ್ಕರ್ ಜೈಲಿಗೆ ಹೋಗಿದ್ರಾ? ಎಂದು ಸಿದ್ದರಾಮಯ್ಯ ಕೇಳಿದರು.

ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಬೇಕು. ಪಾಲಿಸ್ಟರ್ ಇಂದ ಮಾಡಬಾರದು. ಖಾದಿ ಬಟ್ಟೆ ಕೈಮಗ್ಗಗಳಲ್ಲಿ ತಯಾರಾಗುತ್ತೆ. ಇದರ ಉದ್ದೇಶ ಏನೆಂದರೆ ಚರಕದಿಂದ ನೂಲು ತೆಗೆಯುವ ಕರಕುಶಲ ಕರ್ಮಿಗಳಿಗೆ ಉದ್ಯೋಗ ಸಿಗಬೇಕು ಎಂದು. ಚೀನಾದ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿಸಿದರೆ ಇದರ ಉದ್ದೇಶವೇ ಹಾಳಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಜಾಸ್ತಿಯಾಗಿ, ರಫ್ತು ಕಡಿಮೆಯಾಗಿದೆ. ಮೇಕ್ ಇನ್ ಇಂಡಿಯಾ ಎಂದರೆ ರಫ್ತು ಜಾಸ್ತಿಯಾಗಬೇಕಿತ್ತು. ಹೊರಗಡೆಯಿಂದ ತಂದು ಕೊಟ್ಟರೆ ಅದಕ್ಕೆ ಅರ್ಥ ಇರುತ್ತಾ? ಎಂದು ವಿಪಕ್ಷ ನಾಯಕ ಪ್ರಶ್ನಿಸಿದರು.



Join Whatsapp