ಆಕ್ಮೆ ಕ್ಲೀನ್ ಟೆಕ್ ಸಲ್ಯುಷನ್ ಕಂಪೆನಿಯಿಂದ ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಹಾಗೂ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಗುರುಗ್ರಾಮ ಮೂಲದ ಆಕ್ಮೆ ( ACME ) ಕ್ಲೀನ್ ಟೆಕ್ ಸಲ್ಯುಷನ್ಸ್ ಕಂಪೆನಿ ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಆಕ್ಮೆ ಗ್ರೂಪ್ ಕಂಪೆನಿಯ ಸಿಓಓ ಸಂದೀಪ್ ಕಶ್ಯಪ್ ಅವರು ಒಪ್ಪಂದಕ್ಕೆ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಆಕ್ಮೆ ಗ್ರೂಪ್ ನವರಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯವು ಸದಾ ಹೊಸ ತಂತ್ರಜ್ಞಾನ, ಭವಿಷ್ಯದ ಯೋಜನೆಗಳಿಗೆ ಉತ್ತೇಜನ ನೀಡುತ್ತ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ ಎಲ್ಲ ಅಗತ್ಯ ಬೆಂಬಲ ನೀಡಲಿದೆ. ನೀವು ಸಹ ಸಕಾಲದಲ್ಲಿ ಯೋಜನೆ ಜಾರಿಗೊಳಿಸಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಆಕ್ಮೆ ಗ್ರೂಪ್ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್ –ಅಮೋನಿಯ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕಾನೇರ್ ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯ, ಸೋಲಾರ್ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ಆಕ್ಮೆ ಗ್ರೂಪ್ ನ ಉಪಾಧ್ಯಕ್ಷ ಶಶಿ ಶೇಖರ್ ಅವರು ತಿಳಿಸಿದರು.
ಇತ್ತೀಚೆಗೆ ದಾವೊಸ್ ನಲ್ಲಿ ರೆನ್ಯೂ ಪವರ್ ಕಂಪೆನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ 50,000 ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್ನ ಅಧಿಕಾರಿಗಳಾದ ಎಂ.ವಿ.ವಿ.ಎಸ್ ರೆಡ್ಡಿ, ಅರುಣ್ ಚೋಪ್ರಾ ಮತ್ತಿತರರು ಉಪಸ್ಥಿತರಿದ್ದರು. ಕೋಟ್ ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ . ಇಡೀ ದೇಶದಲ್ಲಿಯೇ ಕರ್ನಾಟಕ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ . ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕಕ್ಕೆ ಹರಿದುಬಂದಿರುವ FDI ಮೊತ್ತವೇ ಇದಕ್ಕೆ ಸಾಕ್ಷಿ . ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳು



Join Whatsapp