ಹೆಣ್ಣು ಭ್ರೂಣ ಪತ್ತೆ, ಹತ್ಯೆ ಮಾಡುವ ಜಾಲ ಭೇದಿಸಿದರೆ 50 ಸಾವಿರ ರೂ ಬಹುಮಾನ: ಡಾ. ಡಿ. ರಂದೀಪ್

Prasthutha|

ಬೆಂಗಳೂರು: “ಹೆಣ್ಣು ಮಗುವನ್ನು ಉಳಿಸಿ. ಓದಿಸಿ” ಅಭಿಯಾನದಡಿ ರಾಜ್ಯ ಸರ್ಕಾರ ಹೆಣ್ಣು ಭ್ರೂಣ ಹತ್ಯೆ ತಡೆಗೆ ವ್ಯಾಪಕ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದು, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವ ಜಾಲವನ್ನು ಭೇದಿಸುವ ಗುಪ್ತ ಕಾರ್ಯಾಚರಣೆ ತಂಡಗಳಿಗೆ ರಾಜ್ಯ ಸರ್ಕಾರ 50 ಸಾವಿರ ರೂ ಬಹುಮಾನ ಘೋಷಿಸಿದೆ.

- Advertisement -

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಪಶ್ಚಿಮ ವಿಭಾಗದ ರಾಜ್ಯ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕೋಶದಿಂದ “ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳು [ಲಿಂಗ ಆಯ್ಕೆ ನಿಷೇಧ] ಕಾಯ್ದೆ – 1994 ಕುರಿತ ರಾಜ್ಯದ ಮಟ್ಟದ ಎರಡು ದಿನಗಳ ಕಾರ್ಯಾಗಾರದಲ್ಲಿ ಈ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 2001 ರ ಜನಗಣತಿಯಂತೆ ಒಂದು ಸಾವಿರ ಪುರುಷರಿಗೆ 946 ಹೆಣ್ಣು ಮಕ್ಕಳಿದ್ದು, 2011 ರ ವೇಳೆಗೆ ಲಿಂಗಾನುಪಾತ 948 ಕ್ಕೆ ಏರಿಕೆಯಾಗಿದೆ. 2015 – 16 ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – 4 ರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 910 ರಷ್ಟಿತ್ತು. ಬಳಿಕ 2019 – 20 ರಲ್ಲಿ ನಡೆದ ಎನ್.ಎಫ್.ಎಚ್.ಡಬ್ಲ್ಯೂ-5 ಸಮೀಕ್ಷೆಯಲ್ಲಿ ಈ ಸಂಖ್ಯೆ 978ಕ್ಕೆ ಹೆಚ್ಚಳವಾಗಿದೆ. ಲಿಂಗಾನುಪಾತವನ್ನು ಸೂಕ್ತ ರೀತಿಯಲ್ಲಿ ಸರಿದೂಗಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವ ವೈದ್ಯರು, ಸ್ಕ್ಯಾನಿಂಗ್ ಕೇಂದ್ರಗಳು, ಗರ್ಭಿಣಿ ಸ್ತ್ರೀಯರ ಸಂಬಂಧಿಗಳು, ದಲ್ಲಾಳಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇನ್ನೂ ಹೆಚ್ಚಿನ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಸಂಶಯಾಸ್ಪದ ವೈದ್ಯರು, ಸ್ಕ್ಯಾನಿಂಗ್ ಕೇಂದ್ರಗಳು, ಗರ್ಭಿಣಿಯರ ಸಂಬಂಧಿಗಳು, ದಲ್ಲಾಳಿಗಳ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಯಶಸ್ವಿ ಕಾರ್ಯಾಚರಣೆಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

- Advertisement -

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಾ. ಡಿ. ರಂದೀಪ್, ಜಿಲ್ಲಾ ಮಟ್ಟದಲ್ಲಿ ಯಶಸ್ವಿ ಕಾರ್ಯಾಚರಣೆ ಮೂಲಕ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಬೇಕು. ರಾಜ್ಯದಲ್ಲಿ ಇಂತಹ ಹೀನ ಚಟುವಟಿಕೆಯನ್ನು ನಿಯಂತ್ರಣ ಮಾಡುತ್ತಿದ್ದು, ಹೆಣ್ಣು ಭ್ರೂಣ ಪತ್ತೆ ಮಾಡಲು ವಿಶೇಷವಾಗಿ ಗಡಿ ಪ್ರದೇಶದ ಜನ ನೆರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ. ವಿಶೇಷವಾಗಿ ಸೊಲ್ಲಾಪುರಕ್ಕೆ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇಂತಹ ಕಾರ್ಯಾಚರಣೆಯಲ್ಲಿ ಅಗತ್ಯ ಕಂಡು ಬಂದಲ್ಲಿ ವೈದ್ಯರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕರೆ ನೀಡಿದರು.

ಪಿ.ಸಿ ಅಂಡ್ ಪಿ.ಎನ್.ಡಿ.ಟಿ ವಿಭಾಗದ ರಾಜ್ಯ ನೋಡೆಲ್ ಅಧಿಕಾರಿ ಡಾ. ವಿವೇಕ್ ದೊರೆ ಮಾತನಾಡಿ, ಭ್ರೂಣ ಪತ್ತೆ ಹತ್ಯೆ ತಡೆಗಟ್ಟಲು ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆಂಧ್ರಪ್ರದೇಶ ಗಡಿ ಭಾಗದಲ್ಲಿ ಹೆಚ್ಚಿನ ಭ್ರೂಣ ಪತ್ತೆ ಚಟುವಟಿಕೆಗಳು ನಡೆಯುತ್ತಿರುವ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಪಾಸಣಾ ತಂಡವನ್ನು ರಾಜ್ಯಕ್ಕೆ ಕರೆಸಿಕೊಂಡು ಆಂಧ್ರ ಪ್ರದೇಶ ಗಡಿ ಜಿಲ್ಲೆ ಕೋಲಾರದಲ್ಲಿ ಇತ್ತೀಚೆಗೆ ಆರು ಕೇಂದ್ರಗಳ ಮೇಲೆ ದಾಳಿ ನಡೆಸಿ ಮೂರು ಕೇಂದ್ರಗಳನ್ನು ರದ್ದು ಮಾಡಿದ್ದು, ಎರಡು ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಪಾವಗಡ, ಹಿಂದೂಪುರದ ಎರಡು ಕೇಂದ್ರಗಳಲ್ಲಿ ನ್ಯೂನ್ಯತೆ ಕಂಡು ಬಂದ ಕಾರಣ ಎರಡು ಕೇಂದ್ರಗಳನ್ನು ಮುಚ್ಚಿಸಲಾಗಿದೆ. ಅನುಮಾನ ಇರುವ ಒಂದು ಕೇಂದ್ರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ಎಂ. ಇಂದುಮತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನಾ ನಿರ್ದೇಶಕ ಡಾ. ಜಿ.ಎನ್. ಶ್ರೀನಿವಾಸ, ಯು.ಎನ್.ಎಫ್.ಪಿ.ಎ ನ ಕಾರ್ಯಕ್ರಮ ನಿರ್ವಹಣಾ ತಜ್ಞ ಎಂ.ಎಸ್. ಅಂಜು ಗುಲಾಟಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಿಂಗ ಸಮಾಲೋಚಕರಾದ ಎಂ.ಎಸ್. ಹಾತ್ ಹಮೀದ್ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.



Join Whatsapp