ನಿಧಿ ಆಸೆ ತೋರಿಸಿ 5 ಲಕ್ಷಕ್ಕೆ ಪಂಗನಾಮ: ಕಳ್ಳಸ್ವಾಮಿಯ ಬಣ್ಣದ ಮಾತು ನಂಬಿ ಹಣ ಕಳೆದುಕೊಂಡ ದಂಪತಿ ಕಣ್ಣೀರು

Prasthutha|

ಹಾಸನ: ದಂಪತಿಗೆ ನಿಧಿ ಆಸೆ ತೋರಿಸಿ ಕಳ್ಳಸ್ವಾಮಿಯೊಬ್ಬ ಬರೋಬ್ಬರಿ 5 ಲಕ್ಷ ರೂ.ಗಳಿಗೆ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಮಂಜೇಗೌಡ-ಲೀಲಾವತಿ ದಂಪತಿ ಕಳ್ಳ ಮಂತ್ರವಾದಿಯ ಮಾತಿಗೆ ಮರುಳಾಗಿ ಹಣ ಕಳೆದುಕೊಂಡು ಈಗ ಕಣ್ ಕಣ್ ಬಿಡುತ್ತಿದ್ದಾರೆ.

ಘಟನೆ ಹಿನ್ನೆಲೆ: ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ ಎಂಬ ಚೋರ್ ಸ್ವಾಮೀಜಿ, ನಿಮ್ಮ ಜಮೀನಿನಲ್ಲಿ ನಿಧಿ ಇದೆ, ಅದು ಸಾಕಷ್ಟು ಬೆಲೆ ಬಾಳಲಿದೆ. ನನ್ನಲ್ಲಿರುವ ದೈವ ಶಕ್ತಿಯಿಂದ ಅದನ್ನು ಹೊರ ತೆಗೆಯುತ್ತೇನೆ ಎಂದು ಮೊದಲು ದಂಪತಿಗೆ ಮಂಕುಬೂದಿ ಎರಚಿ ನಂಬಿಸಿದ್ದಾನೆ. ಇದಕ್ಕೂ ಮುನ್ನ ಮೊದಲೇ ಕುತಂತ್ರ ರೂಪಿಸಿ ಮಂಜೇಗೌಡ ಅವರ ಹೊಲದಲ್ಲಿ ಚಿನ್ನ ಲೇಪಿತ ಮೂರು ಕೆಜಿ ಬೆಳ್ಳಿ ವಿಗ್ರಹವನ್ನು ಸ್ವಾಮಿ ಹೂತಿಟ್ಟಿದ್ದ. ಈತನ ಮಾತನ್ನು ಬಲವಾಗಿ ನಂಬಿದ ರೈತ ದಂಪತಿಯನ್ನು

- Advertisement -

ರಾತ್ರಿ ವೇಳೆ ಅವರ ಜಮೀನಿಗೆ ಕರೆದುಕೊಂಡು ಹೋಗಿ ತಾನೇ ಹೂತಿಟ್ಟಿದ್ದ ಬೆಳ್ಳಿ ವಿಗ್ರಹದ ಬಳಿ ಯಾವುದೇ ಅನುಮಾನ ಬಾರದಂತೆ ರಾತ್ರೋರಾತ್ರಿ ಅನೇಕ ರೀತಿಯ ಪೂಜೆ ಮಾಡಿಸಿದ್ದಾನೆ.

ಅದಾದ ನಂತರ ಜಮೀನಿನಲ್ಲಿ ತಾನೇ ಹೂತಿಟ್ಟಿದ್ದ ಚಿನ್ನ ಲೇಪಿತ ವಿಗ್ರಹವನ್ನು ಹೊರತೆಗೆದು ದಂಪತಿಗೆ ನೀಡಿದ್ದಾನೆ. ಆಗ ನಮ್ಮ ಜಮೀನಿನಲ್ಲಿ ನಿಧಿ ಎಂದು ದಂಪತಿ ಬಲವಾಗಿ ನಂಬಿದ್ದಾರೆ. ಬಳಿಕ ಚಿನ್ನದ ವಿಗ್ರಹಕ್ಕೆ ರಕ್ತದ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದು ಮತ್ತೆ ಕ್ರೌರ್ಯ ಮೆರೆದಿದ್ದಾನೆ. ಅದಾದ ಬಳಿಕ ಲಕ್ಷ ಲಕ್ಷ ಹಣವನ್ನು ಪಡೆದು ಅಲ್ಲಿಂದ ಮಂಜೇಗೌಡ ಪರಾರಿಯಾಗಿದ್ದಾನೆ. ಇದೆಲ್ಲಾ ಆದ ಒಂದು ವಾರದ ನಂತರ ಜ್ಯೂಯೆಲ್ಲರಿ ಶಾಪ್‌ಗೆ ವಿಗ್ರಹ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಇದು ಚಿನ್ನ ಅಲ್ಲ ಬೆಳ್ಳಿ ವಿಗ್ರಹ ಎಂಬುದು ಗೊತ್ತಾಗಿದೆ. ರಕ್ತದ ಅಭಿಷೇಕ ಮಾಡಲು ಲೀಲಾವತಿ ಅವರ ಕೈ ಬೆರಳಿನ ನರವನ್ನೇ ಕಳ್ಳಸ್ವಾಮಿ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆವೆ ವಾಪಸ್ಸಾಗಿದ್ದಾರೆ. ಮೂರು ಕೆಜಿ ಬೆಳ್ಳಿಯಾಚೆಗೆ 5 ಲಕ್ಷ ಹಣ ಕಳೆದುಕೊಂಡಿರುವ ದಂಪತಿ ಈಗ ಹೀಗಾಯಿತಲ್ಲಾ ಎಂದು ಚಿಂತೆಗೆ ಬಿದ್ದಿದ್ದಾರೆ.

ಕಳ್ಳ ಮಂತ್ರವಾದಿ ಇದೊಂದೇ ಅಲ್ಲ, ಈ ಹಿಂದೆ ಇದೇ ಹಲವು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ.



Join Whatsapp