ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಪ್ಪ ಕಾಣಿಕೆ ಸಲ್ಲಿಸುವುದು BJP ಸಂಸ್ಕೃತಿಯಲ್ಲ ಅದು ಕಾಂಗ್ರೆಸ್ ಸಂಸ್ಕೃತಿ ಎಂದಿದ್ದಾರೆ. ಹಾಗಾದರೆ BJPಯಲ್ಲಿ CM ಆಗಲು 2 ಸಾವಿರ ಕೋಟಿ ಪೇಮೆಂಟ್ ಕೊಡುವುದನ್ನು ಏನನ್ನಬೇಕು? ಪೇಮೆಂಟ್ ಕೋಟಾದಲ್ಲಿ ಬೊಮ್ಮಾಯಿ CM ಆಗಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 2 ಸಾವಿರ ಕೋಟಿ ಪೇಮೆಂಟ್ ಕಪ್ಪ ಅಲ್ಲವೇ? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವತಃ ಯತ್ನಾಳ್ ರವರೆ BJPಯ ಕಪ್ಪ ಕಾಣಿಕೆ ಸಂಸ್ಕೃತಿಯ ಬಗ್ಗೆ ಊರಲೆಲ್ಲಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಆರೋಪ ನಾವು ಮಾಡಿದರೆ ವಿರೋಧ ಪಕ್ಷದವರ ಸುಳ್ಳು ಆರೋಪ ಎಂದು ತಿಪ್ಪೆ ಸಾರಿಸುತ್ತಾರೆ. ಆದರೆ ಯತ್ನಾಳ್ BJPಯ ಶಾಸಕ. ಜೊತೆಗೆ ಹಿರಿಯ ನಾಯಕ. BJPಯ ಒಳಗುಟ್ಟುಗಳು, ಹಣದ ವ್ಯವಹಾರಗಳು ಯತ್ನಾಳ್ ಗಿಂತ ನಮಗೆ ಗೊತ್ತಿರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮಾಯಿಯವರು BJPಯಲ್ಲಿ ಕಪ್ಪ ಕಾಣಿಕೆ ಸಂಸ್ಕೃತಿ ಇಲ್ಲ ಹಾಗೂ ತಾವು ಪೇಮೆಂಟ್ ಕೋಟಾದಲ್ಲಿ CM ಆಗಿಲ್ಲ ಎಂದು
ಬಸನಗೌಡ ಪಾಟೀಲ್ ಯತ್ನಾಳ್ ಬಾಯಲ್ಲಿ ಹೇಳಿಸಲಿ. ಆಮೇಲೆ ಮುಂದಿನ ಮಾತು. ಅದು ಬಿಟ್ಟು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದರೆ ಅದು ಅವರ ಬುಡಕ್ಕೆ ಅಪಾಯ. ಬೊಮ್ಮಾಯಿಯವರು ಇದನ್ನು ಅರಿತುಕೊಂಡರೆ ಸಾಕು ಎಂದು ದಿನೇಶ್ ಹೇಳಿದ್ದಾರೆ.