ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟವು ನಂದಿನಿ ತುಪ್ಪದ ಬೆಲೆಯನ್ನು ನಿರಂತರ ಹೆಚ್ಚಿಸುತ್ತಿದ್ದು, ಎರಡೂವರೆ ತಿಂಗಳಲ್ಲಿ ಲೀಟರ್ ಗೆ ಬರೋಬ್ಬರಿ 180 ರೂಪಾಯಿ ಬೆಲೆ ಹೆಚ್ಚಳ ಮಾಡಿದೆ.
ಆಗಸ್ಟ್ 22 ರಂದು ಒಂದು ಲೀಟರ್ ನಂದಿನಿ ತುಪ್ಪ 450 ರೂಪಾಯಿಗೆ ಮಾರಾಟವಾಗುತ್ತಿದ್ದು, ಈಗ ಲೀಟರ್ ಗೆ 630 ರೂ. ಆಗಿದೆ. ಜಿಎಸ್ ಟಿ ದರಗಳ ಪರಿಷ್ಕರಣೆಯು ಕೆಎಂಎಫ್ ಗೆ ಮೊಸರು ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದ್ದರೂ, ತುಪ್ಪ ಮತ್ತು ಹಾಲಿನ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಆದರೆ ಹಾಲಿನ ಮಾರಾಟದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಕೆಎಂಎಫ್ ಈಗ ನಿರಂತರವಾಗಿ ತುಪ್ಪದ ಬೆಲೆಯನ್ನು ಏರಿಸುತ್ತಾ ಇದೆ.
ಒಂದು ತಿಂಗಳ ಹಿಂದೆ 113 ರೂ.ಗೆ ಮಾರಾಟವಾದ 200 ಎಂಎಲ್ ತುಪ್ಪಕ್ಕೆ 135 ರೂ. ಬೆಲೆಯಿದೆ. ಪೆಟ್ ಬಾಟಲ್ ಬೆಲೆಯೂ 122 ರೂ.ನಿಂದ 145 ರೂ.ಗೆ ಏರಿಕೆಯಾಗಿದೆ. ಒಟ್ಟಿನಲ್ಲಿ ಎಲ್ಲದರ ಬೆಲೆ ಏರಿಕೆಯಿಂದ ಜನಸಾಮಾನ್ಯ ತತ್ತರಿಸುವಂತಾಗಿದೆ