ಶಿಮ್ಲಾ: 2024-25ರ ಹಣಕಾಸು ವರ್ಷದಿಂದಲೇ 18ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕ ರೂ. 1,500 ಸರಕಾರ ನೀಡಲಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಘೋಷಿಸಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವು ನೀಡಿದ್ದ 10 ಗ್ಯಾರಂಟಿಗಳ ಪೈಕಿ ಇದೂ ಸಹ ಒಂದಾಗಿದ್ದು,ಮಹಿಳೆಯರಿಗೆ ಮಾಸಿಕ ₹1,500 ನೀಡುವ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂದಿರಾಗಾಂಧಿ ಪ್ಯಾರಿ ಬೆಹನಾ ಸುಖ್ ಸಮ್ಮಾನ್ ನಿಧಿ ಯೋಜನೆ’ಯಡಿ ಇದಕ್ಕಾಗಿ ವಾರ್ಷಿಕ ₹800 ಕೋಟಿ ವೆಚ್ಚ ಮಾಡಲಾಗುತ್ತದೆ. ಸುಮಾರು 5 ಲಕ್ಷ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ ಎಂದು ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.
ಈ ಮೂಲಕ 10 ಗ್ಯಾರಂಟಿಗಳ ಪೈಕಿ 5 ಗ್ಯಾರಂಟಿ ಪೂರ್ಣಗೊಳ್ಳಲಿವೆ. ಹಳೆ ಪಿಂಚಣಿ ಜಾರಿಯು 1.36 ಲಕ್ಷ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದೂ ಹಿಮಾಚಲ ಸಿಎಂ ಹೇಳಿದ್ದಾರೆ.
ಸಿಎಂ ಘೋಷಣೆ ಮತ್ತೊಂದು ಸುಳ್ಳು ಎಂದು ವಿಪಕ್ಷ ನಾಯಕ ಜೈರಾಮ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ಬಜೆಟ್‌ನಲ್ಲಿ ಈ ಯೋಜನೆಗೆ ಅವಕಾಶವೇ ಇಲ್ಲ. ಏಪ್ರಿಲ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಮಹಿಳೆಯರಿಗೆ ಹೇಗೆ ಹಣ ನೀಡಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.