ಬೆಂಗಳೂರು: ‘ರಾಜ್ಯ ಸರ್ಕಾರವನ್ನು ಉರುಳಿಸಲು ₹ 1 ಸಾವಿರ ಕೋಟಿ ಮೀಸಲಿಡಲಾಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಬಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆ ತನಿಖೆ ನಡೆಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಮತ್ತು ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ಈ ವಿಚಾರವಾಗಿ ನಮ್ಮ ಕಾನೂನು ಸಲಹೆಗಾರರ ಬಳಿಯೂ ಚರ್ಚೆ ನಡೆಸಲಾಗುವುದು’ ಎಂದರು.
ಗೃಹ ಸಚಿವ ಜಿ. ಪರಮೇಶ್ವರ ಜೊತೆಗಿನ ಭೇಟಿ ವಿಚಾರವಾಗಿ ಪ್ರಕ್ರಿಯಿಸಿದ ಶಿವಕುಮಾರ್, ‘ಪರಮೇಶ್ವರ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಾವು ರಾಜಕೀಯವಾಗಿ ಚರ್ಚೆ ಮಾಡಿಲ್ಲ’ ಎಂದರು.
‘ದಿನಾ ರಾಜಕೀಯ ಮಾಡುತ್ತಲೇ ಇರುತ್ತೇವೆ. ಅಭಿವೃದ್ಧಿ ಮಾಡಲು ನಾವು ಅಧಿಕಾರಕ್ಕೆ ಬಂದಿದ್ದೇವೆ. ನಾವು ಅಭಿವೃದ್ಧಿ ಮಾಡಬೇಕಲ್ಲವೇ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲವೇ. ನಾನು ಪರಮೇಶ್ವರ, ಸಿದ್ದರಾಮಯ್ಯ ಒಟ್ಟಿಗೆ ಇರುವುದಲ್ಲ. ನಾವು 136 ಶಾಸಕರೂ ಒಗ್ಗಟ್ಟಾಗಿದ್ದೇವೆ’ ಎಂದರು.