ಅಡಿಕೆಗೆ ಚುಕ್ಕೆ ರೋಗ:  ಔಷಧಿಗೆ 10 ಕೋಟಿ  ರೂ.ಗಳ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಉಡುಪಿ:  ಅಡಿಕೆ ಮರಗಳಿಗೆ ಚುಕ್ಕೆ ರೋಗ ಬಂದಿದ್ದು,   ಅದನ್ನು ತಡೆಗಟ್ಟಲು ಅಗತ್ಯವಿರುವ ಔಷಧಿಗಾಗಿ  ತಕ್ಷಣಕ್ಕೆ 10 ಕೋಟಿ ರೂ.ಗಳ ಅನದಾನವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ  ಕುಡಿಯುವ ನೀರು, ಮರವಂತೆ ಮೀನುಗಾರಿಕೆ ಬಂದರು, ಏತ ನೀರಾವರಿ ಯೋಜನೆಗಳ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬೊಮ್ಮಾಯಿ, ಉಡುಪಿ ಭಾಗದಲ್ಲಿ ಕುಚುಲಕ್ಕಿ ಸೇವನೆ ಸಾಮಾನ್ಯ.  ಕುಚಲಕ್ಕಿಯನ್ನು ರೈತರಿಂದ ಖರೀದಿಸಿ ಪಡಿತರ ಚೀಟಿ ಮೂಲಕ ವಿತರಿಸಲು ಸೂಚಿಸಲಾಗಿದೆ. ಈ ಭಾಗದ ಬೇಕು ಬೇಡಗಳ ಬಗ್ಗೆ ನಮಗೆ ಅರಿವಿದೆ.  ಬರುವ ದಿನಗಳಲ್ಲಿ ನಮ್ಮ ಕೆಲಸಗಳ ವರದಿಯನ್ನು ಜನರ ಮುಂದೆ ಇಡಲಾಗುವುದು. ರಾಜ್ಯದ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತಿದ್ದೇವೆ.  ಅಭಿವೃದ್ಧಿ ನಿರಂತರವಾಗಿ ತಿರುಗುವ ಚಕ್ರ. ಅದು ಎಂದೂ ನಿಲ್ಲಬಾರದು ಎಂದು ಹೇಳಿದರು.

2 ಲಕ್ಷ ಮೀನುಗಾರರ ಮಕ್ಕಳಿಗೆ  ವಿದ್ಯಾನಿಧಿ:

- Advertisement -

ರೈತ ವಿದ್ಯಾನಿಧಿ ಯೋಜನೆಯನ್ನು ಈ ವರ್ಷ ರೈತ ಕೂಲಿಕಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ಕರಾವಳಿಯ   2 ಲಕ್ಷ ಮೀನುಗಾರರ ಮಕ್ಕಳಿಗೆ  ಕೆಲವೇ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ನೀಡಲಿದ್ದೇವೆ ಎಂದರು. ಇದೊಂದು ದೊಡ್ಡ ಕ್ರಾಂತಿ.  ಮೀನುಗಾರರ ಮಕ್ಕಳು ಓದಿ ಮುಂದೆ ಬಂದರೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬಹುದು. ದುಡಿಯುವ ವರ್ಗ ಸ್ವಾವಲಂಬನೆಯ ಮೂಲಕ ಸ್ವಾಭಿಮಾನದ ಬದುಕು ಬದುಕಬೇಕು. ಅವರೂ ಮುಖ್ಯವಾಹಿನಿಗೆ ಬರಬೇಕು. ದುಡಿಮೆಯೇ ದೊಡ್ಡಪ್ಪ ಎಂದು ನಮ್ಮ ಸರ್ಕಾರ ನಂಬಿದೆ ಎಂದು ಹೇಳಿದರು.

ಸಮಾಜದಲ್ಲಿ ಬದಲಾವಣೆ:

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ  ವಿಶೇಷವಾದ ಅನುದಾನ ನೀಡಲಾಗಿದೆ.  ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ 28 ಸಾವಿರ ಕೋಟಿ ಅನುದಾನ ಬಜೆಟ್ ನಲ್ಲಿ ನೀಡಿ ಬಿಡುಗಡೆ ಮಾಡಿ, ಅನುಷ್ಠಾನಕ್ಕೆ ತರಲಾಗುತ್ತಿದೆ. ನೂರು ಡಾ:ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದೆ.  ಕನಸದಾಸರ  ಹೆಸರಿನಲ್ಲಿ 50 ಹಿಂದುಳಿದ ವರ್ಗಗಳ  ವಿದ್ಯಾರ್ಥಿನಿಲಯಗಳು ನಿರ್ಮಿಸಲಾಗುತ್ತಿದೆ. ಮಂಗಳೂರಿನಲ್ಲಿ 1000 ವಿದ್ಯಾರ್ಥಿಗಳ ಸಾಮಥ್ರ್ಯವುಳ್ಳ ವಿದ್ಯಾರ್ಥಿನಿಲಯವನ್ನು ನಿರ್ಮಿಸುತ್ತಿದ್ದೇವೆ.  ಬೆಂಗಳೂರು,  ಗುಲ್ಬರ್ಗಾ, ಧಾರವಾಡ, ಮೈಸೂರಿನಲ್ಲಿಯೂ  ನಿರ್ಮಿಸಲಾಗುತ್ತಿದೆ.  ನಾರಾಯಣ ಗುರು ಅವರ  ಹೆಸರಿಲ್ಲಿ ನಾಲ್ಕು ವಸತಿ ಶಾಲೆಗಳನ್ನು ಈ ವರ್ಷ ಮಂಜೂರಾತಿ ಮಾಡಲಾಗಿದ್ದು, ಅಡಿಗಲ್ಲು ಹಾಕಲಾಗಿದೆ.   ಸಮಾಜದಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ತಿಳಿಸಿದರು.

ಸಾಮಾಜಿಕ ಕ್ರಾಂತಿ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಕ್ರಾಂತಿಕಾರಿ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮನೆ ನಿರ್ಮಾಣದ ಮೊತ್ತವನ್ನು  2 ಲಕ್ಷಕ್ಕೆ ಮೊತ್ತವನ್ನು ಏರಿಸಲಾಗಿದೆ. ಭೂಮಿಯನ್ನು ಕೊಳ್ಳಲು 15 ಲಕ್ಷ ಇದ್ದ ಮೊತ್ತವನ್ನು 20 ಲಕ್ಷಕ್ಕೆ ಏರಿಸಲಾಗಿದೆ. ಹಾಸ್ಟಲ್‍ಗಳಿಗೆ  251 ಕೋಟಿ  ರೂ.ಗಳ ಮಂಜೂರಾತಿ ನೀಡಿ ಬಿಡುಗಡೆಯೂ ಆಗಿದೆ.  5 ದಶಕಗಳಿಂದ ಬೇಡಿಕೆಯಿದ್ದ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಪರಿಗಣಿಸಿ ಪರಿಶಿಷ್ಟ ಜಾತಿಗೆ ಶೇ  15 ರಿಂದ 17 ಕ್ಕೆ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ 3 ರಿಂದ ಶೇ  7 ರಷ್ಟು  ಹೆಚ್ಚು ಮಾಡಿದೆ.  ಕರ್ನಾಟಕದಾದ್ಯಂತ  ಈ ಸಮುದಾಯ ನಮ್ಮನ್ನು ಗುರುತಿಸಿ, ಗೌರವಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ನೀಡಿದ್ದಾರೆ  ಎಂದು ಸಂತೋಷಪಟ್ಟಿದ್ದಾರೆ. ಇದು ಸಾಮಾಜಿಕ ಕ್ರಾಂತಿ ಎಂದು ಹೇಳಿದರು.

ಬೈಂದೂರಿನಲ್ಲಿ  ಅಭಿವೃದ್ಧಿಯ ಶಕೆ:

ಬೈಂದೂರಿನಲ್ಲಿ  ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ. ಜನಪರ ಸರ್ಕಾರ ಇದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಜನಸ್ಪಂದನೆ ದೊರೆಯುತ್ತದೆ ಎನ್ನಲು ಬೈಂದೂರಿನ ಅಭಿವೃದ್ಧಿಯ ಕಥೆಯೇ ಸಾಕ್ಷಿ.  ಕೇಂದ್ರ ಹಾಗೂ ರಜ್ಯದ ಯೋಜನೆಗಳೆರಡೂ ಸಮನಾಗಿ ಜನರಿಗೆ ಮುಟ್ಟಿಸುವ ಕೆಲಸವಾಗಲು ಡಬಲ್ ಇಂಜಿನ್ ಸರ್ಕಾರ ವಿದ್ದರೆ,  ಈ ಕ್ಷೇತ್ರದ ಅಭಿವೃದ್ಧಿಗೂ ಡಬಲ್ ಇಂಜಿನ್ ಇದೆ.  ಸಂಸದ ಬಿ.ವೈ ರಾಘವೇಂದ್ರ ಹಾಗೂ ಶಾಸಕ  ಸುಕುಮಾರ್ ಶೆಟ್ಟಿ ಇಬ್ಬರೂ ಅಭಿವೃದ್ಧಿಯ ವೇಗ ಹೆಚ್ಚಿದೆ. ನಮ್ಮ ಸರ್ಕಾರ ಜನರಿಗೆ ಸ್ಪಂದಿಸುವ ಸರ್ಕಾರ. ಜನರ ಕಷ್ಟಸುಖದಲ್ಲಿ ಪಾಲ್ಗೊಂಡು ಅದಕ್ಕೆ ಪರಿಹಾರವನ್ನು ಕೊಡುವ, ಅಭಿವೃದ್ಧಿಯ ಪರವಾಗಿರುವ ಸರ್ಕಾರ ನಮ್ಮದು. ಮನೆ ಮನೆಗೆ ಬೆಳಕು ಕಾರ್ಯಕ್ರಮದಡಿ ಬಡವರ ಮನೆಗೆ ವಿದ್ಯತ್ ಸಂಪರ್ಕ ನೀಡಲಾಗಿದೆ. ನಮ್ಮ ಸರ್ಕಾರ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿದ್ದು,  ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 9.3 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮುಂದಿನ ದಿನಗಳಲ್ಲಿ ಆಗಲಿದೆ. ಕರಾವಳಿ ಪ್ರದೇಶದಲ್ಲಿ ಸುಮಾರು 2. ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ  ಮತ್ತು ಯುವಕರ ಕೈಗೆ ಕೆಲಸ ನೀಡುವ ಬೃಹತ್ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಉಳುಮೆ ಮಾಡುವವರಿಗೆ ಭೂಮಿ:

ಡೀಮ್ಡ್  ಅರಣ್ಯವಾಗಿದ್ದ  ಆರು ಲಕ್ಷ ಹೆಕ್ಟೇರ್ ಮೂಲ ಕಂದಾಯ ಭೂಮಿಯನ್ನು  ಉಳುಮೆ ಮಾಡುವ ರೈತನಿಗೆ ಹಕ್ಕು ಸಿಗುವ ರೀತಿಯಲ್ಲಿ  ತೀರ್ಮಾನ ಮಾಡಲಾಗಿದೆ. 90 ಸಿ ಮತ್ತು 90 ಸಿಸಿ ಅಡಿ ನಿಗದಿತ ಸಮಯದಲ್ಲಿ ಹಕ್ಕನ್ನು ನೀಡುತ್ತೇವೆ ಎಂದರು.  

ಬೈಂದೂರು ಬಂದರಿನ ಸಮಗ್ರ ಅಭಿವೃದ್ಧಿ:

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಯಾಗುತ್ತಿದೆ. ಕಿಸಾನ್ ಸಮ್ಮಾನ್, ಮುದ್ರಾ ಯೋಜನೆ,  ಪ್ರಧಾನಮಂತ್ರಿ ಆವಾಸ್ ಯೋಜನೆ ಉಜ್ವಲ ಯೋಜನೆ ನೀಡಿದ್ದಾರೆ.  ಈ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿದರೆ ಜನ ಈ ವ್ಯವಸ್ಥೆಯಲ್ಲಿ, ಪ್ರಜಾಪ್ರಭುತ್ವದಲ್ಲಿ, ನಂಬಿಕೆ ಇಡುತ್ತಾರೆ. ಅದೇ ಡಾ: ಬಿ.ಆರ್. ಅಂಬೇಡ್ಕರ್ ಅವರ ಗುರಿ.  ಸಾಮಾಜಿಕ  ಬದಲಾವಣೆ ಕೇಂದ್ರದಲ್ಲಿಯೂ ನಡೆಯುತ್ತಿದೆ. ಇಂದು  ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದಿರುವ ವರಿಗೆ ಶೇ 10 ರಷ್ಟು ಮೀಸಲಾತಿಯನ್ನು ನೀಡಿದ್ದು ಅದನ್ನು ಸವೋಚ್ಛ ನ್ಯಾಯಾಲಯ  ಎತ್ತಿ ಹಿಡಿದಿದೆ. ಇದರಿಂದ ದೊಡ್ಡ ಬದಲಾವಣೆ ದೊರೆಯಲಿದೆ.  ಶಿಕ್ಷಣ ಮತ್ತು ಉದ್ಯೋದಲ್ಲಿ ಅವಕಾಶಗಳು ದೊರೆಯಲಿವೆ. ಬೈಂದೂರು ಬಂದರಿನ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದು ಎಂದರು. 

ಈ ಸಂಧರ್ಭದಲ್ಲಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಎಸ್ ಅಂಗಾರ, ಸುನೀಲ್ ಕುಮಾರ್,  ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಸುಕುಮಾರ್ ಶೆಟ್ಟಿ,  ಹಾಲಾಡಿ ಶ್ರೀನಿವಾಸ ಶೆಟ್ಟಿ,  ಲಾಲಾಜಿ ಮೆಂಡನ್,  ರಘುಪತಿ ಭಟ್, ಜಯಪ್ರಕಾಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.



Join Whatsapp