ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದವರು ಬದಲಿ ನಿವೇಶನ ನೀಡಿದ ವಿಚಾರದಲ್ಲಿ ಷಡ್ಯಂತ್ರ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಹಿಂದುಳಿದ ವರ್ಗದ ನಾಯಕನನ್ನು ಬೆಂಬಲಿಸಿ ಜುಲೈ 13ರಂದು ಬೆಳಿಗ್ಗೆ 11ಕ್ಕೆ ನಗರದ ಗುರು ರೆಸಿಡೆನ್ಸಿ ಹೋಟೆಲ್ ನಲ್ಲಿ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಮುಖರು ಭಾಗವಹಿಸಲಿದ್ದಾರೆ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಬಗ್ಗೆ ನಿರ್ಧರಿಸಲಾಗುವುದು’ ಎಂದರು.
‘ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ಬಹಳಷ್ಟು ನಾಯಕರು ಈಗ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದಾರೆ. 2021ರಲ್ಲೇ ನಾವು ಹೋರಾಟ ಮಾಡಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ದಾಖಲೆ ಸಮೇತ ದೂರು ನೀಡಿದ್ದೆವು. ಆದರೆ, ಕ್ರಮ ಕೈಗೊಳ್ಳಲಿಲ್ಲ. ಇಲ್ಲಿ ಮಹಾನ್ ಭ್ರಷ್ಟಾಚಾರ ಆಗಿದ್ದರೆ ಅದರ ಪಿತಾಮಹ ಬಿ.ವೈ.ವಿಜಯೇಂದ್ರ. ಆ ಗ್ಯಾಂಗ್ ಸೇರಿ ಪ್ರಾಧಿಕಾರವನ್ನು ದುಃಸ್ಥಿತಿಗೆ ತಂದಿಟ್ಟಿದೆ’ ಎಂದು ದೂರಿದರು.