ಚೆನ್ನೈ: ಇಲ್ಲಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಡಿಎಂಕೆ ಪರ ಪ್ರಚಾರ ಮಾಡಿದ್ದ ರೊಮೇನಿಯಾದ ಉದ್ಯಮಿ ನೆಗೊಯಿಟಾ ಸ್ಟೀಫನ್ ಮಾರಿಯಸ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು ಅವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಪ್ರವಾಸದ ಮೇಲೆ ಬಂದಿದ್ದ ಅವರು ಕೋಯಮತ್ತೂರಿನಲ್ಲಿ ಡಿಎಂಕೆ ಧ್ವಜಗಳಿಂದ ಅಲಂಕರಿಸಲ್ಪಟ್ಟ ಮೋಟಾರ್‌ಬೈಕ್ ನಲ್ಲಿ ಬುಧವಾರ ನಗರದಾದ್ಯಂತ ರಸ್ತೆಯಲ್ಲಿರುವ ಜನರಿಗೆ ಮತ್ತು ಬಸ್ ಪ್ರಯಾಣಿಕರಿಗೆ ಡಿಎಂಕೆ ಕರಪತ್ರಗಳನ್ನು ಹಂಚಿದ್ದರು ಎನ್ನಲಾಗ್ತಿದೆ.
ಇದರ ನಡುವೆ ಡಿಎಂಕೆ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿ, ನೆಗೋಯಿಟಾ ತನ್ನ ಸ್ವಂತ ಆಸಕ್ತಿಯಿಂದ ಪ್ರಚಾರ ಮಾಡಿದ್ದಾರೆ ಮತ್ತು ಡಿಎಂಕೆಯ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಹೊಗಳಿದ್ದರು.
ನಂತರ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನುಂಗಂಬಾಕ್ಕಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಅವರನ್ನು ವಿಚಾರಣೆ ನಡೆಸಿ ವಿವರಣೆ ಪಡೆದುಕೊಳ್ಳಲಾಗಿದೆ.
ಸ್ಟೀಫನ್ ನೆಗೋಯಿಟಾ ಅವರಿಗೆ ಈ ದೇಶದಲ್ಲಿ ಯಾವುದೇ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ.