ರಾಷ್ಟ್ರಕವಿ ಕುವೆಂಪುಗೆ ಅಪಮಾನ: ರೋಹಿತ್ ಚಕ್ರತೀರ್ಥ, ಲಕ್ಷ್ಮಣ್ ವಿರುದ್ಧ ದೂರು

Prasthutha|

ಬೆಂಗಳೂರು: ರಾಷ್ಟ್ರಕವಿ ಕುವೆಂಪುರವರಿಗೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಆಕಾಶೆ ವಿರುದ್ಧ ವಕೀಲರ ನಿಯೋಗ ದೂರು ದಾಖಲಿಸಿದೆ.
ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲರಾದ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿರುವ ಇವರು ನಾಡಗೀತೆಗೂ ಅವಮಾನ ಮಾಡಿದ್ದಾರೆ. ಆದ್ದರಿಂದ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ವಿರುದ್ಧ ತಕ್ಷಣವೇ ಕಾನೂನು ರೀತಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

- Advertisement -

2017ರಲ್ಲಿ ರೋಹಿತ್‌ ಚಕ್ರತೀರ್ಥಎಂಬಾತ ಕನ್ನಡ ನಾಡಿನ ಜನಮಾನಸದ ಹೃದಯ ಗೀತೆ ನಾಡಗೀತೆಯನ್ನು ವ್ಯಂಗ್ಯಮಾಡಿ, ವಿಕೃತಗೊಳಿಸಿ, ನಾಡಗೀತೆಗೆ ಅಪಾರ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದು ಕುವೆಂಪು ಅವರ ಗೌರವಕ್ಕೆ ಧಕ್ಕೆ ತರುವ ಜೊತೆಗೆ ಅವರ ಅಪಾರ ಅಭಿಮಾನಿ ವರ್ಗದ ಭಾವನೆಗಳಿಗೆ ನೋವುಂಟು ಮಾಡಿದೆ. ಕುವೆಂಪು ಅವರ “ಜಯ ಭಾರತ ಜನನಿಯ ತನುಜಾತೆ” ಎಂದು ಆರಂಭವಾಗುವ ನಾಡಗೀತೆಯಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಜನಜೀವನ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವಿದೆ. ಇದೇ ಕಾರಣಕ್ಕೆರಾಜ್ಯ ಸರಕಾರ ಈ ಗೀತೆಯನ್ನುಅಧಿಕೃತ ನಾಡಗೀತೆಯಾಗಿ ಅಂಗೀಕರಿಸಿದೆ.

- Advertisement -

ಅತ್ಯಂತ ಅಭಿಮಾನ, ಗೌರವದೊಂದಿಗೆ ಹಾಡುವ ನಾಡಗೀತೆಗೆ ರೋಹಿತ್‌ ಚಕ್ರತೀರ್ಥ ಎಂಬಾತ ಅಪಮಾನ ಮಾಡಿ ಅಸಡ್ಡೆ, ಅಸಹನೆ, ಗೇಲಿಗೆ ಒಳಪಡಿಸಿರುವುದು ಕನ್ನಡಿಗರಿಗೆ ಮತ್ತು ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಅದೇ ರೀತಿ, ಮತ್ತೋರ್ವ ಲಕ್ಷ್ಮಣ್ ಕಾರ್ಕಳ ಎಂಬಾತನೂ ಕುವೆಂಪು ಅವರನ್ನು ನಿಂದಿಸಿದ್ದು, ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ದೂರಿನಲ್ಲಿ ಮನವಿ ಮಾಡಿದೆ.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಹಿರಿಯ ವಕೀಲರಾದ ಹರಿರಾಂ, ಕೆ.ಎನ್.ಜಗದೀಶ್‌ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಸೇರಿದಂತೆ ಪ್ರಮುಖರ ನಿಯೋಗದಲ್ಲಿದ್ದರು.



Join Whatsapp