ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್ ! ಪ್ರಿಯಾಂಕ್ ಪಾಂಚಾಲ್’ಗೆ ಅವಕಾಶ

Prasthutha|

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಅಭ್ಯಾಸದ ವೇಳೆ ಗಾಯಗೊಂಡಿರುವ ಉಪನಾಯಕ ರೋಹಿತ್ ಶರ್ಮಾ, ಡಿಸೆಂಬರ್ 26ರಿಂದ ಆರಂಭವಾಗಲಿರುವ 3 ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ರೋಹಿತ್ ಸ್ಥಾನಕ್ಕೆ ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಆಯ್ಕೆಯಾಗಿದ್ದಾರೆ.

- Advertisement -

ಟೆಸ್ಟ್ ತಂಡದ ಉಪನಾಯಕನಾಗಿ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ನೇಮಕವಾಗಿದ್ದರು. ಹರಿಣಗಳ ವಿರುದ್ಧದ ಸರಣಿಗಾಗಿ ರೋಹಿತ್, ಕಳೆದ ಒಂದು ವಾರದಿಂದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆದರೆ ಭಾನುವಾರ ಎಡ ಮಂಡಿರಜ್ಜು ನೋವಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು BCCI ಟ್ವೀಟ್’ನಲ್ಲಿ ತಿಳಿಸಿದೆ. ಜನವರಿಯಲ್ಲಿ ನಡೆಯಲಿರುವ ಏಕದಿನ ಸರಣಿಗೆ ರೋಹಿತ್ ಶರ್ಮಾ ಲಭ್ಯರಾಗುವ ನಿರೀಕ್ಷೆ ಇದೆ.

ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನಾಡಲು ಟೀಮ್ ಇಂಡಿಯಾ ಗುರುವಾರ (ಡಿ.16)ದಂದು ಜೊಹಾನೆಸ್’ಬರ್ಗ್’ಗೆ ಪ್ರಯಾಣ ಬೆಳಸಲಿದೆ. ರೋಹಿತ್ ಶರ್ಮಾ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕ್ ಪಾಂಚಾಲ್,  ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದರು. ಭಾರತ ಎ ತಂಡದ ಪರ ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 120 ರನ್ ಗಳಿಸಿದ್ದಾರೆ. ಇದರಲ್ಲಿ 96 ರನ್ ಗರಿಷ್ಠ ಮೊತ್ತವಾಗಿದೆ.  31 ವರ್ಷದ ಪಾಂಚಾಲ್ 100 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 45.52ರ ಬ್ಯಾಟಿಂಗ್ ಸರಾಸರಿಯಲ್ಲಿ 7011 ರನ್ ಗಳಿಸಿದ್ದು, ಇದರಲ್ಲಿ 24 ಶತಕಗಳು ಸೇರಿವೆ.

- Advertisement -


ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ

ಮೊದಲ ಟೆಸ್ಟ್‌: ಡಿಸೆಂಬರ್ 26-30, ಸೂಪರ್‌’ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್

ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನೆಸ್’ಬರ್ಗ್

ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್‌’ಟೌನ್

Join Whatsapp