ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯಲ್ಲಿ ಕೇವಲ ಮನುವಾದಿಗಳೇ ತುಂಬಿದ್ದಾರೆ. ಶೇ.90ರಷ್ಟು ಮಂದಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯಾವುದೇ ಸಮಿತಿಯಲ್ಲಿ ಒಂದೇ ಸಮಿತಿಯವರು ಇದ್ದರೆ ವಿಭಿನ್ನತೆ ಕಾಪಾಡಲು, ಸಾಮಾಜಿಕ ನ್ಯಾಯ ನೀಡಲು ಸಾಧ್ಯವೇ? ಒಂದೇ ದೃಷ್ಟಿಕೋನದಲ್ಲಿ ಸಮಿತಿ ರಚಿಸಿ, ಒಂದೇ ತತ್ವವನ್ನು ನಮ್ಮ ಸಮಾಜದ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಇದು ಆರ್ ಎಸ್ಎಸ್ ಸಿದ್ಧಾಂತವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಚಿವ ಅಶ್ವತ್ಥ್ ನಾರಾಯಣ ಅವರು ಲಂಡನ್ ಗೆ ಹೋಗಿ ಬಂಡವಾಳ ಹೂಡಿಗೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದರು. ನಾನು ಮಾಹಿತಿ ತಂತ್ರಜ್ಞಾನ ಸಚಿವನಾಗಿದ್ದ ಸಮಯದಲ್ಲಿ ನನಗೂ ಈ ಅವಕಾಶ ಸಿಕ್ಕಿತ್ತು. ನಾವು ವಿದೇಶಕ್ಕೆ ಹೋದಾಗ ಅಲ್ಲಿನ ಉದ್ಯಮಿಗಳು ಭಾರತದ ಬಗ್ಗೆ ಅದರಲ್ಲೂ ಕರ್ನಾಟಕ ಹಾಗೂ ಬೆಂಗಳೂರಿನ ಮಾನವ ಸಂಪನ್ಮೂಲದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಪ್ರಗತಿಪರ ಆಲೋಚನೆ ಅತ್ಯುತ್ತಮವಾಗಿದೆ ಹೀಗಾಗಿ ನಾವು ನಿಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಅಶ್ವತ್ಥ್ ನಾರಾಯಣ ಅವರು ತೆರಳಿದ್ದಾಗ ವಿಚಿತ್ರವಾದ ಪ್ರಶ್ನೆ ಎದುರಾಯಿತು. ನೀವು ಇಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡುತ್ತಿದ್ದೀರಿ. ಆದರೆ ನಿಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಿಜಾಬ್ ವಿಚಾರ ಎಷ್ಟು ಸರಿ ಎಂದು ಕೇಳಿದ್ದಾರೆ. ಅದಕ್ಕೆ ಸಚಿವರು ನಾವು ಬಂಡವಾಳದ ವಿಚಾರ ಮಾತನಾಡೋಣ, ನಂತರ ಅದರ ಬಗ್ಗೆ ಮಾತನಾಡೋಣ ಎಂದು ಹೇಳಿದ್ದಾರೆ. ನನ್ನ ಪ್ರಶ್ನೆ ಇಷ್ಟೇ, ನಮ್ಮ ಉದ್ದೇಶ ಮಾನವಸಂಪನ್ಮೂಲ ಬೆಳೆಸುವುದಾಗಿದ್ದರೆ, ಅದಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ. ಆದರೆ ಈ ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಿಂದಿನ ಸಮಿತಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿ ರಚನೆ ಪ್ರಕ್ರಿಯೆ ಹೇಗಿತ್ತು ಎಂದು ನಮ್ಮ ಮಾಜಿ ಸಚಿವರು ವಿವರಿಸಿದ್ದಾರೆ. 2014ರಲ್ಲಿ ಇದನ್ನು ಸ್ಥಾಪಿಸಿದ್ದು, ಆ ಸಮಿತಿ ಎರಡೂವರೆ ವರ್ಷ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಮಾಡಿದ್ದರು. ಸಂವಿಧಾನದ ತತ್ವಕ್ಕೆ ಅನುಗುಣವಾಗಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ಹಲವು ಮಾನದಂಡಗಳಿಂದ 27 ಉಪ ಸಮಿತಿ ಮಾಡಿ 30 ಹೆಚ್ಚು ತತ್ವಜ್ಞಾನಿ, ಉಪಾಧ್ಯಾಯರು, ವಿಜ್ಞಾನಿಗಳು ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಜತೆ ಚರ್ಚೆ ಮಾಡಿ, ನಂತರ ಸಚಿವರು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಉಪ ಸಮಿತಿಗಳ ಲೋಪ ಸರಿಪಡಿಸಲು ಉನ್ನತ ಸಮಿತಿ ರಚಿಸಿ, ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಇಂದು ಈ ಸರ್ಕಾರ ಹಿಂದಿನ ಸಮಿತಿ ವಿಚಾರವಾಗಿ ಸಾಕಷ್ಟು ಪ್ರಶ್ನೆ ಎತ್ತಿದೆ. ಅದಕ್ಕೆ ಹಿಂದಿನ ಸಮಿತಿಯವರು, ಮಾಜಿ ಸಚಿವರು ಉತ್ತರ ನೀಡಿದ್ದಾರೆ. ಅವರು ಕಳೆದ ಸಮಿತಿ ಬಗ್ಗೆ ಮಾತನಾಡಲು ತೋರುತ್ತಿರುವ ಉತ್ಸಾಹವನ್ನು ಈಗಿನ ಸಮಿತಿ ಬಗ್ಗೆ ಮಾತನಾಡಲು ತೋರುತ್ತಿಲ್ಲ ಯಾಕೆ? ಈ ಸಮಿತಿಯಲ್ಲಿ ಕೇವಲ ಮನುವಾದಿಗಳೇ ತುಂಬಿದ್ದಾರೆ. ಶೇ.90ರಷ್ಟು ಮಂದಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯಾವುದೇ ಸಮಿತಿಯಲ್ಲಿ ಒಂದೇ ಸಮಿತಿಯವರು ಇದ್ದರೆ ವಿಭಿನ್ನತೆ ಕಾಪಾಡಲು, ಸಾಮಾಜಿಕ ನ್ಯಾಯ ನೀಡಲು ಸಾಧ್ಯವೇ? ಒಂದೇ ದೃಷ್ಟಿಕೋನದಲ್ಲಿ ಸಮಿತಿ ರಚಿಸಿ, ಒಂದೇ ತತ್ವವನ್ನು ನಮ್ಮ ಸಮಾಜದ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಇದು ಆರ್ ಎಸ್ಎಸ್ ಸಿದ್ಧಾಂತವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ ನಡೆಸಿದರು.
ಈ ಸಮಿತಿಯಲ್ಲಿ ಓರ್ವ ವಿಜ್ಞಾನಿ, ಶಿಕ್ಷಣ ತಜ್ಞ ಇದ್ದಾರಾ? ನಾವು ಪರಿಷ್ಕರಣೆ ವಿರುದ್ಧವಾಗಿಲ್ಲ. ಬದಲಾವಣೆ ಅಗತ್ಯ. ಆದರೆ ವೈಜ್ಞಾನಿಕ ಮನೋಭಾವನೆ ಕೊಲ್ಲಲು, ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಮರೆಮಾಚುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ. ಈ ರೋಹಿತ್ ಚಕ್ರತೀರ್ಥ ಯಾರು? ಇವರ ಅರ್ಹತೆ ಏನು? ಬರಗೂರು ರಾಮಚಂದ್ರಪ್ಪ ಅವರ ಅರ್ಹತೆ ಹಾಗೂ ಇವರ ಅರ್ಹತೆಯನ್ನು ನೀವೇ ತುಲಾಭಾರ ಮಾಡಿ. ಇವರ ಅರ್ಹತೆ ಬಗ್ಗೆ ಪ್ರಶ್ನೆ ಮಾಡಿದರೆ ಸರ್ಕಾರ ಮಂತ್ರಿಗಳು ಯಾಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರು ಐಐಟಿ ಪ್ರೋಫೆಸರ್ ಆಗಿದ್ದಾರೆ ಎಂದು ಸಚಿವರು ಹೇಳುತ್ತಿದ್ದಾರೆ. ಟ್ಯೂಷನ್ ಟೀಚರ್ ಆದರೆ ಸಮಿತಿಗೆ ನೇಮಿಸುತತೀರಾ? ಈ ಸರ್ಕಾರಕ್ಕೆ ಮಾನದಂಡ ಬೇಡವೇ? ಇನ್ನು ರೋಹಿತ್ ಚಕ್ರತೀರ್ಥ ಅವರೇ ನಾನು ಐಐಟಿ ಹಾಗೂ ಟ್ಯೂಷನ್ ಟೀಚರ್ ಅಲ್ಲ ಎಂದು ಹೇಳುತ್ತಾರೆ. ಅವರ ಹಿನ್ನೆಲೆ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರೆ, ಅವರು ಯೂಟ್ಯೂಬ್ ನಲ್ಲಿ ಹೇಳಿಕೊಡುತ್ತಿರುವ ಪಾಠಕ್ಕೆ 20 ಜನ ವೀಕ್ಷಕರಿಲ್ಲ. ಇಂತಹ ಮೇಧಾವಿಯನ್ನು 1 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇವರು ಶಿಕ್ಷಣ ತಜ್ಞರಿದ್ದರೆ ಸರ್ಕಾರ ಯಾಕೆ ಸಮರ್ಥನೆಗೆ ಮುಂದೆ ಬರುತ್ತಿದೆ. ಬಿಜೆಪಿಯಲ್ಲಿ ಇರುವುದು ಒಂದೇ ಮಾನದಂಡ. ಅದು ಅಶ್ಲೀಲತೆ ಎಂದು ಹೇಳಿದರು.
ಕೇವಲ ಒಂದು ಪಾಠ ತಿರುಚಿ ಹೇಳುತ್ತೀರಿ. ಹೆಡೆಗೆವಾರ್ ಅವರು ಭಾಗವಧ್ವಜಕ್ಕೆ ನಮ್ಮ ನಿಯತ್ತು ಇರಬೇಕು ಎಂದು ಹೇಳಿದ್ದು, ಪಠ್ಯದಲ್ಲಿ ಕೇವಲ ಧ್ವಜ ಎಂದು ಯಾಕೆ ಹೇಳಿದ್ದೀರಿ? ಅದನ್ನು ಹೇಳಲು ಧೈರ್ಯ ಇಲ್ಲವೇ? ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್, ಹೇಳಿಕೆ ನೀಡುವವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡುಚತ್ತೀರಾ? ನಮ್ಮ ವಿದ್ಯಾರ್ಥಿ ಭವಿಷ್ಯ ಹಾಳು ಮಾಡುತ್ತಿದ್ದರೆ ನಾವದನ್ನು ನೋಡಿ ಸುಮ್ಮನೆ ಕೂರಬೇಕಾ? ಈ ಸಮಿತಿ, ಸರ್ಕಾರಕ್ಕೆ ಸಮಾನತೆ ಎಂದರೆ, ಸಂವಿಧಾನ, ದಲಿತರು ಎಂದರೆ ಅಲರ್ಜಿ. ಮಹಿಳೆಯರು ಹಿಂದುಳಿದವರು ಮುಖ್ಯವಾಹಿನಿಗೆ ಬರಬಾರದು, ಆರ್ಥಿಕವಾಗಿ ಮುಂದೆಬರಬಾರದು ಎಂಬ ಧೋರಣೆಗಳಿವೆ.ಇವರು ಎಂತಹ ತತ್ವಜ್ಞಾನಿಗಳು, ಸಮಾನತೆ ಪ್ರತಿಪಾದನೆ ಮಾಡಿದವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದವರ ಜೀವನ ಚರಿತ್ರೆ ತಿರುಚಿದ್ದಾರೆ ಅಥವಾ ಕೈಬಿಟ್ಟಿದ್ದಾರೆ. ಬುದ್ಧ, ಬಸವ, ನಾರಾಯಣಗುರು ಅವರಿಗೆ ಅನ್ಯಾಯ ಮಾಡಿದ್ದು, ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರ. ಸಾವಿತ್ರಿ ಭಾಯಿ ಪುಲೆ ಅವರ ಪಠ್ಯ ಬಿಟ್ಟಿದ್ದಾರೆ. ಪಿ.ಲಂಕೇಶ್, ಮಾಲಗತ್ತಿ, ದೇವನೂರು ಮಹಾದೇವ ಅವರ ಲೇಖನ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಏನು? ಪ್ರಸ್ತುತವಲ್ಲವೇ? ವೈಜ್ಞಾನಿಕ ಭಾವನೆ, ಸಂವಿಧಾನ ಆಶಯ ಇಲ್ಲವೇ? ಇವರ ಲೇಖನ ಬದಲಾಗಿ ಮೋದಿಗೆ ಜೈಕಾರ ಹಾಕುವವರ ಲೇಖನ ಹಾಕಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ನಿನ್ನೆ ಮುಖ್ಯಮಂತ್ರಿಗಳು ಪತ್ರಿಕಾಪ್ರಕಟಣೆ ಪ್ರಕಟಿಸಿದ್ದು, ನನಗೆ ಇವರ ಉತ್ತರ ಕೇಳಿ ಸಾಕಾಗಿದೆ. ನನಗೆ ಒಂದು ಸ್ಪಷ್ಟನೆ ಬೇಕಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ಯಾವುದೇ ವಿಚಾರ ನೋಡಿದರೂ ಮುಖ್ಯಮಂತ್ರಿಗಳು ಮೂಖಬಸವರಾಗಿರುತ್ತಾರೆ ಯಾಕೆ? ಯಾರ ಬಳಿ ನ್ಯಾಯ ಕೇಳಬೇಕು? ಪಿಎಸ್ಐ ಹಗರಣ ಅಂದರೂ ಸುಮ್ಮನಿರುತ್ತಾರೆ, ಅವರು ಹಿಂಜರಿಯುತ್ತಿರುವುದೇಕೆ. ನಾಡಗೀತೆ ತಿರುಚಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳು ಸಾಧ್ಯವಾಗುತ್ತಿಲ್ಲ ಯಾಕೆ? ಆತ ಅಷ್ಟೋಂದು ಪ್ರಭಾವಿ ವ್ಯಕ್ತಿಯೇ? ಕುವೆಂಪು, ಬುದ್ಧ, ನಾರಾಯಣ ಗುರು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಆತನ ಮುಂದೆ ಮಂಡಿಯೂರುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಮೋದಿ ವಿರುದ್ಧ ಸತ್ಯ ಮಾತನಾಡಿದವರನ್ನು ಜೈಲಿಗೆ ಹಾಕುತ್ತೀರ, ನಾಡಗೀತೆ ಅಪಮಾನ ಮಾಡಿದವನಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 40 ಪರ್ಸೆಂಟ್ ಸರ್ಕಾರ, ನೇಮಕಾತಿ ಅಕ್ರಮ, ವರ್ಗಾವಣೆ ದಂದೆ ಮಾಡಿದಾಗ ಸುಮ್ಮನೆ ಇರುತ್ತೀರ. ಶ್ರೀರಾಮಸೇನೆ ಅಧ್ಯಕ್ಷರು ಸರ್ಕಾರದ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡಿದಾಗ ಸುಮ್ಮನಿರುತ್ತೀರಾ ಎಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು? ಈ ರಾಜ್ಯವನ್ನು ಪುಂಡರು ನೀಡುತ್ತಿದ್ದೀರಾ? ಅವರು ನಿಮಗೆ ಗಡುವು ನೀಡುತ್ತಿದ್ದೀರಾ?
ನಾವು ಕಾಂಗ್ರೆಸ್ ನವರ ಮಾತು ಬಿಡಿ. ಎಷ್ಟು ಮಠಾಧೀಶರು ಈ ಬಗ್ಗೆ ಪತ್ರ ಬರೆದಿದ್ದಾರೆ? ಒಕ್ಕಲಿಗರ ಸಂಘದಿಂದ ನಿಮಗೆ ಪತ್ರ ಬಂದಿಲ್ಲವೇ? ಆಧುನಿಕ ಚಿಂತಕರು, ಸಂಘ ಸಂಸ್ಥೆಗಳಿಂದ ಪತ್ರ ಬಂದಿಲ್ಲವೇ? ಇವರೆಲ್ಲರೂ ಕಾಂಗ್ರೆಸ್ ಬೆಂಬಲಿಗರೇ? ಇವರಿಂದ ಸಮಾಜಕ್ಕೆ ಕೊಡುಗೆ ಇಲ್ಲವೇ? ನಿಮಗೆ ರೋಹಿತ್ ಚಕ್ರತೀರ್ಥ ಬಗ್ಗೆ ಇರುವ ಕಾಳಜಿ, 1 ಕೋಟಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಇಲ್ಲವೇ? ಈ ಸರ್ಕಾರ ಇರಬೇಕಾ? ನಿನ್ನೆಯ ಸುತ್ತೋಲೆಯಲ್ಲಿ ಭಿನ್ನ ಹೇಳಿಕೆ ಇವೆ. ಪಠ್ಯಪುಸ್ತಕ ಸಮಿತಿ ವಿಸರ್ಜಿಸಲಾಗಿದೆ ಎಂದು ಇದೆ. ಇನ್ನು ಈ ಪಠ್ಯದಲ್ಲಿ ಲೋಪ ಇದ್ದರೆ ಮರು ಪರಿಷ್ಕರಣೆಗೆ ಸರ್ಕಾರ ಮುಕ್ತ ಮನಸ್ಸು ಇದೆ ಎಂದು ಹೇಳಿದೆ. ಈ ಪರಿಷ್ಕರಣೆ ಮಾಡುವವರು ಯಾರು? ಈ ಪುಸ್ತಕ ಮುದ್ರಣವಾಗಿವೆ. ಇದು ನೀವು ಸುಳ್ಳು ಹೇಳುತ್ತಿಲ್ಲವೇ? ಎಂದು ಖರ್ಗೆ ಪ್ರಶ್ನಿಸಿದರು.