ಬೆಂಗಳೂರು: ಜಿಲೆಟಿನ್ ಕಡ್ಡಿ ಬಳಸಿ ಬಂಡೆಯೊಂದನ್ನು ಸ್ಫೋಟಗೊಳಿಸಿದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿನಗರದ ಐಎಎಸ್ ಅಧಿಕಾರಿಯೊಬ್ಬರ ಪತ್ನಿಗೆ ಸೇರಿದ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು, ಮಣ್ಣು ತೆಗೆಯುವಾಗ ಬಂಡೆ ಪತ್ತೆಯಾಗಿದೆ. ಬಂಡೆಯನ್ನು ಸ್ಫೋಟಿಸಲು ಜಿಲೆಟಿನ್ ಕಡ್ಡಿ ಬಳಸಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ನಗರದಲ್ಲಿ ಜಿಲೆಟಿನ್ ಕಡ್ಡಿ ನಿಷೇಧಿತ ವಸ್ತುವಾಗಿದ್ದರೂ ಕೂಡ ಬಳಸಲಾಗಿದೆ.
ಈ ಹಿನ್ನೆಲೆ ಸೋಮಶೇಖರ್ ಎಂಬುವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಡೈನಮೈಟ್ ಸ್ಪೋಟ:
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಕಾಮಗಾರಿಯಲ್ಲಿ ಡೈನಮೈಟ್ ಬಳಕೆ ಮಾಡಿ ಕಲ್ಲು ಬಂಡೆ ಬ್ಲಾಸ್ಟ್ ಮಾಡಲಾಗುತ್ತಿದ್ದು, ಇದರಿಂದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದಲ್ಲಿ ಯೋಜನೆಯ ಕಾಮಗಾರಿ ನಡೆದಿದ್ದು, ಕಾಮಗಾರಿ ವೇಳೆ ಸಿಗುವ ಕಲ್ಲು ಬಂಡೆಗಳನ್ನು ಒಡೆಯಲು ವಿಶ್ವೇಶ್ವರಯ್ಯ ಜಲ ನಿಗಮ ಸಿಬ್ಬಂದಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸ್ಫೋಟದ ತೀವ್ರತೆಗೆ ಮನೆಗಳ ಗೋಡೆಗಳು ಬಿರುಕು ಬೀಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.