ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ದರೋಡೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

Prasthutha|

ಬೆಂಗಳೂರು: ನಗರದ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಸುಲಿಗೆ ಮತ್ತು ದರೋಡೆ ಪ್ರಕರಣದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

- Advertisement -

ದರೋಡೆ ಪ್ರಕರಣದ ಆರೋಪಿ ಯಾಸರ್ (26) ಎಂಬಾತನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದು, ಈತ ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದ. ಯಾಸರ್ ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.

 ಈತ ಅಪ್ರಾಪ್ತನಾಗಿದ್ದಾಗಿನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದು, ಶೇಷಾದ್ರಿಪುರಂ ಪೋಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.

- Advertisement -

ಇಂದು (ಮಂಗಳವಾರ) ಬೆಳಗ್ಗೆ ಆರೋಪಿ ಯಾಸರ್‌ನನ್ನು ಹಿಡಿಯಲು ಹೋದಾಗ ಆತ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪ್ಯಾಲೆಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ತಮ್ಮ ಆತ್ಮರಕ್ಷಣೆಗಾಗಿ ಶೇಷಾದ್ರಿಪುರಂ ಇನ್ಸ್ಪೆಕ್ಟರ್‌ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ. ಈ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ