ಬೆಂಗಳೂರು: ಭಾನುವಾರ ತಡ ರಾತ್ರಿ ಸುರಿದ ಭಾರೀ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ನೀರಿನಲ್ಲಿ ಮುಳುಗಿದೆ.
ಏರ್ಪೋರ್ಟ್ ಹೆಚ್ ಬಿಆರ್ ಲೇಔಟ್, ಇಂದಿರಾನಗರ ಸೇರಿದಂತೆ ಅನೇಕ ಏರಿಯಾಗಳು ಸಂಪೂರ್ಣ ಜಲಾವೃತವಾಗಿವೆ.
ನಿರಂತರ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿವೆ. ಬಹುತೇಕ ರಸ್ತೆಯಲ್ಲಿ ಸಂಚಾರ ಮಾಡಿದರೂ ರಸ್ತೆಯ ಬದಲು ನೀರನ್ನೆ ಕಾಣುವ ಪರಿಸ್ಥಿತಿ ಉಂಟಾಗಿದೆ.
ಕೆಟ್ಟು ನಿಂತ ವಾಹನಗಳು, ಆಟೋವನ್ನು ತಳ್ಳಿಕೊಂಡು ಹೋಗುತ್ತಿರುವ ಆಟೋ ಚಾಲಕರ ದೃಶ್ಯ ಎಲ್ಲೆಡೆ ಕಂಡುಬಂತು. ಹಲಸೂರು, ಜೀವನ್ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರು ಕ್ರಾಸ್ ಜಲಾವೃತಗೊಂಡಿದೆ. ಮೆಜೆಸ್ಟಿಕ್ ಸುತ್ತಮುತ್ತ ಕೆರೆಯಂತಾಗಿದ್ದವು. ಬೆಂಗಳೂರು ಏರ್ ಪೋರ್ಟ್ ನಲ್ಲೂ ಭಾರೀ ಮಳೆಗೆ ಸಂಪೂರ್ಣ ಜಲಾವೃತವಾಗಿದ್ದು, ಜನರು ಸಂಚಾರಕ್ಕೆ ಪರದಾಡಿದ್ದಾರೆ.
ಅಲ್ಲದೆ, ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ದಿನ ಬಿಟ್ಟು ದಿನ ಮಳೆ ಮುಂದುವರಿದಿದೆ. ಇದೀಗ ಸೆಪ್ಟಂಬರ್ 7ರವರೆಗೆ ಸಾಧಾರಣದಿಂದ ಭಾರಿ ಮಳೆ ಸುರಿಯುವ ಲಕ್ಷಣಗಳು ಇದ್ದು, ಮೂರು ದಿನ ಬೆಂಗಳೂರಿನಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ.