ರೋಡ್‌ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್‌| ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್

Prasthutha|

ಆರಂಭದಲ್ಲಿ ನಮನ್‌ ಓಜಾ ಮತ್ತು ಕೊನೆಯಲ್ಲಿ ಇರ್ಫಾನ್‌ ಪಠಾಣ್‌ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡವನ್ನು ಮಣಿಸಿದ ಇಂಡಿಯಾ ಲೆಜೆಂಡ್ಸ್‌, ರೋಡ್‌ ಸೇಫ್ಟಿ ವರ್ಲ್ಡ್ ಲೆಜೆಂಡ್ಸ್ ಸೀರಿಸ್‌ ಟೂರ್ನಿಯ ಫೈನಲ್‌ ತಲುಪಿದೆ.

- Advertisement -

ರಾಯ್‌ಪುರ್‌ನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್, ಸಚಿನ್‌ ಪಡೆಗೆ  172 ರನ್‌ಗಳ  ʻಫೈನಲ್‌ ಗುರಿʼ ನೀಡಿತ್ತು. ಚೇಸಿಂಗ್‌ ವೇಳೆ ಆರಂಭಿಕ ನಮನ್‌ ಓಜಾ ಮತ್ತು ಇರ್ಫಾನ್‌ ಪಠಾಣ್‌ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ 19.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿತು.

ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸಚಿನ್‌ ತೆಂಡೂಲ್ಕರ್ 10 ರನ್‌ಗಳಿಸುವಷ್ಟರಲ್ಲೇ ನಿರ್ಗಮಿಸಿದರು. ಬಳಿಕ ಬಂದ ಸುರೇಶ್‌ ರೈನಾ ಮತ್ತು ಯುವರಾಜ್‌ ಸಿಂಗ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರಿಸಿದ ಆರಂಭಿಕ ನಮನ್‌ ಓಜಾ, 62 ಎಸೆತಗಳಲ್ಲಿ 5 ಸಿಕ್ಸರ್‌ ಮತ್ತು 7 ಬೌಂಡರಿಗಳ ನೆರವಿನಿಂದ 90 ರನ್‌ಗಳಿಸಿ ಅಜೇಯರಾಗುಳಿದರು.

- Advertisement -

ಅಂತಿಮ 3 ಓವರ್‌ಗಳಲ್ಲಿ ಇಂಡಿಯಾ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಈ ವೇಳೆ 18 ಓವರ್‌ನಲ್ಲಿ 2 ಬೌಂಡರಿ ಮತ್ತು 19ನೇ ಓವರ್‌ನಲ್ಲಿ 3 ಸಿಕ್ಸರ್‌ ಸಿಡಿಸಿದ ಎಡಗೈ ಬ್ಯಾಟರ್‌ ಇರ್ಫಾನ್‌ ಪಠಾಣ್‌, ಆಸ್ಟ್ರೇಲಿಯಾ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ಲೆಜೆಂಡ್ಸ್‌, ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 171 ರನ್‌ಗಳಿಸಿತ್ತು. ನಾಯಕ ಶೇನ್‌ ವಾಟ್ಸನ್‌ (30 ರನ್‌), ಅಲೆಕ್ಸ್‌ ಡೂಲನ್‌ (30 ರನ್‌), ಹಾಗೂ ಬೆನ್‌ ಡಂಕ್‌ 46 ರನ್‌ಗಳಿಸಿದ್ದರು.  ಇಂಡಿಯಾ ಲೆಜೆಂಡ್ಸ್‌  ಪರ ಬೌಲಿಂಗ್‌ನಲ್ಲಿ ಅಭಿಮನ್ಯು ಮಿಥುನ್‌ ಮತ್ತು ಯೂಸುಫ್‌ ಪಠಾಣ್‌ ತಲಾ 2 ವಿಕೆಟ್‌ ಪಡೆದರು.

​​​​​​​ಶುಕ್ರವಾರ ನಡೆಯುವ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ಮತ್ತು ವೆಸ್ಟ್‌ ಇಂಡೀಸ್‌ ಲೆಜೆಂಡ್ಸ್‌ ಮುಖಾಮುಖಿಯಾಗಲಿದೆ. ಈ ಪಂದ್ಯದ ವಿಜೇತರನ್ನು ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್‌ ಎದುರಿಸಲಿದೆ.

Join Whatsapp